×
Ad

​ರಾಜ್ಯದಲ್ಲಿ ಆಗಸ್ಟ್‌ನಲ್ಲಿ ಶಾಲೆಗಳು ಆರಂಭ: ಸಚಿವ ಸುರೇಶ್ ‌ಕುಮಾರ್

Update: 2020-06-09 18:04 IST

ಉಡುಪಿ, ಜೂ.9: ರಾಜ್ಯದಲ್ಲಿ ಬಹುತೇಕವಾಗಿ ಆಗಸ್ಟ್ ತಿಂಗಳ ಮಧ್ಯಭಾಗ ದಲ್ಲಿ ಶಾಲೆಗಳು ಪ್ರಾರಂಭಗೊಳ್ಳಬಹುದು. ಶಾಲೆಯನ್ನು ಹಂತಹಂತವಾಗಿ ಪ್ರಾರಂಭಿಸುವ ಇರಾದೆ ಸರಕಾರಕ್ಕಿದೆ. ಪ್ರಾರಂಭಕ್ಕೆ ಮುನ್ನ ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚಿಸಿ, ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಎಸೆಸೆಲ್ಸಿ ಪರೀಕ್ಷೆ ಪೂರ್ವಸಿದ್ಧತೆ ಕುರಿತಂತೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜಿಪಂ ಸಿಇಓ, ಶಿಕ್ಷಣ ಇಲಾಖೆಯ ಡಿಡಿಪಿಐ, ಬಿಇಓಗಳೊಂ ದಿಗೆ ನಡೆಸಿದ ಸಮಾಲೋಚನಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡುತಿದ್ದರು.

ಸದ್ಯಕ್ಕಂತೂ ರಾಜ್ಯದಲ್ಲಿ ಯಾವುದೇ ಶಾಲೆಯನ್ನು ಆರಭಿಸುವ ಉದ್ದೇಶ ಸರಕಾರಕ್ಕಿಲ್ಲ. ಬಹುತೇಕ ಆಗಸ್ಟ್ ತಿಂಗಳ ಮದ್ಯಭಾಗದಲ್ಲಿ ಶಾಲೆ ಪ್ರಾರಂಭ ಗೊಳ್ಳಬಹುದು. ಶಾಲೆಯನ್ನು ಹಂತಹಂತವಾಗಿ -ಮೊದಲು ಹೈಸ್ಕೂಲ್, ಬಳಿಕ ಹಿರಿಯ ಪ್ರಾಥಮಿಕ ಶಾಲೆ ಹೀಗೆ-ಪ್ರಾರಂಭಿಸುತ್ತೇವೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಆದೇಶ ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ, ಶಾಲಾ ಮಕ್ಕಳ ಪೋಷಕರ, ಶಿಕ್ಷಣ ತಜ್ಞರು, ಶಿಕ್ಷಕರ ಅಭಿಪ್ರಾಯಗಳನ್ನು ಪಡೆದು ಆಗಸ್ಟ್ ತಿಂಗಳಲ್ಲಿ ಶಾಲೆ ಪ್ರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸುರೇಶ್‌ ಕುಮಾರ್ ತಿಳಿಸಿದರು.

ಎಸೆಸೆಲ್ಸಿ ಪರೀಕ್ಷೆ ರದ್ದು ಇಲ್ಲ: ಕೋವಿಡ್-19ರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ. ಈ ವಿಷಯದಲ್ಲಿ ನಾವು ತುಂಬಾ ಮುಂದೆ ಬಂದಿದ್ದೇವೆ. ತೆಲಂಗಾಣ, ತಮಿಳುನಾಡು ಪರೀಕ್ಷೆ ರದ್ದು ಮಾಡಿವೆ ಎಂದು ನಾವು ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ. ನಾವು ಅವರನ್ನು ಫಾಲೋ ಮಾಡುವುದಿಲ್ಲ. ಮಕ್ಕಳ ಹಿತವನ್ನು ಗಮನದಲ್ಲಿರಿಸಿಕೊಂಡು ಎಚ್ಚರಿಕೆ ಕ್ರಮದೊಂದಿಗೆ ಪರೀಕ್ಷೆ ನಡೆಸುತ್ತೇವೆ. ಅವರು ನಮ್ಮನ್ನು ಫಾಲೋ ಮಾಡಬೇಕು ಎಂದರು.

ನಾವು ಎಸೆಸೆಲ್ಸಿ ಪರೀಕ್ಷೆಯನ್ನು ರದ್ದುಪಡಿಸದೇ, ಮಕ್ಕಳ ಸುರಕ್ಷತೆ ಹಾಗೂ ಮಕ್ಕಳ ಆತ್ಮವಿಶ್ವಾಸ ಎರಡಕ್ಕೂ ಗಮನವಿಟ್ಟು ಅಗತ್ಯ ಕ್ರಮ ಗಳೊಂದಿಗೆ ಪರೀಕ್ಷೆಯನ್ನು ನಡೆಸುತ್ತೇವೆ. ಕೇಂದ್ರ ಗೃಹ ಇಲಾಖೆ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. ಜೊತೆಗೆ ಕೇಂದ್ರ ಸಿಬಿಎಸ್‌ಸಿ ಪರೀಕ್ಷೆಯ ದಿನಾಂಕವನ್ನೂ ಪ್ರಕಟಿಸಿದೆ. ಕರ್ನಾಟಕ ಹೈಕೋಟ್ ಸಹ ಪರೀಕ್ಷೆ ನಡೆಸಲು ಹಸಿರು ನಿಶಾನಿ ತೋರಿಸಿದ್ದಲ್ಲದೇ, ಕೆಲವು ಸೂಚನೆಗಳನ್ನೂ ನೀಡಿದೆ ಎಂದವರು ತಿಳಿಸಿದರು.

ಪೂರಕ ಪರೀಕ್ಷೆಯಲ್ಲಿ ಅವಕಾಶ: ಕೋವಿಡ್‌ನ ಬದಲಾದ ಸನ್ನಿವೇಶದಲ್ಲಿ ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಬರೆಯುವ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಪ್ರತಿ ಕೊಠಡಿಯಲ್ಲಿ ಇನ್ನು 18ರಿಂದ ಗರಿಷ್ಠ 20 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಮಕ್ಕಳ ನಡುವೆ ಅಥವಾ ಡೆಸ್ಕ್‌ಗಳ ನಡುವೆ 3.5ಅಡಿ ಅಂತರವಿರುತ್ತದೆ. ಪ್ರತಿ ಮಗು ಮಾಸ್ಕ್ ಹಾಕಿ ಬರೆಯುವ ವ್ಯವಸ್ಥೆ. ಎಲ್ಲಾ ಮಕ್ಕಳಿಗೆ ಕನಿಷ್ಠ 2 ಮಾಸ್ಕ್‌ಗಳನ್ನು ನೀಡುತ್ತೇವೆ. ಎಲ್ಲಾ ಕೇಂದ್ರಗಳನ್ನು ಸೆನಟೈಸ್ ಮಾಡಲಾಗುವುದು. ಪ್ರತಿ ಮಗುವಿನ ಆರೋಗ್ಯ ತಪಾಸಣೆಗೆ ವ್ಯವಸ್ಥೆ, ಇದಕ್ಕಾಗಿ ಪ್ರತಿ 200 ಮಗುವಿಗೊಂದು ಥರ್ಮಲ್ ಸ್ಕಾನರ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಪ್ರತಿ ಕೊಠಡಿ ಸೆನಟೈಸ್ ಮಾಡಿ, ಮೇಲ್ವಿಚಾರಕರು ಸಹ ಮಾಸ್ಕ್ ಹಾಕಿದ್ದು, ಆರೋಗ್ಯ ತಪಾಸಣೆಗೊಳಗಾಗಬೇಕು. ಅವರ ಕೈಗೆ ಗ್ಲೌಸ್ ಕಡ್ಡಾಯ. ಕುಡಿಯುವ ಬಿಸಿ ನೀರನ್ನು ಪ್ರತಿ ಮಗು ಮನೆಯಿಂದ ತರುವಂತೆ ಸೂಚನೆ ನೀಡಲಾಗುವುದು. ಅದೇ ರೀತಿ ನ್ಯಾಯಾಲಯದ ಆದೇಶದಂತೆ ಅಗತ್ಯವಿರುವ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಮಕ್ಕಳ ಪಟ್ಟಿ ಹಾಗೂ ರೂಟ್ ಮ್ಯಾಪ್ ತಯಾರಿಸಿ, ಸಾರಿಗೆ ಇಲಾಖೆ ಅಧಿಕಾರಿಗಳ ಮೂಲಕ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದರು.

ಪೂರಕ ಪರೀಕ್ಷೆಯಲ್ಲಿ ಅವಕಾಶ:  ಕಂಟೈನ್ಮೆಂಟ್ ವಲಯದಲ್ಲಿರುವ ಮಕ್ಕಳಿಗೆ ಜೂ.25ರಿಂದ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ಮುಂದಿನ ಪೂರಕ ಪರೀಕ್ಷೆಯಲ್ಲಿ ಫ್ರೆಶ್ ಅಭ್ಯರ್ಥಿಯಾಗಿಯೇ ಬರೆಯಲು ಅವಕಾಶ ಒದಗಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 28 ಜಿಲ್ಲೆಗಳಿಗೆ ಈಗಾಗಲೇ ಭೇಟಿ ನೀಡಿ, ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ನಡೆಸುವ ಸಿದ್ಧತೆ ಕುರಿತು ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು, ಪೋಷಕರು ಸೇರಿದಂತೆ ಸಂಬಂಧಿತ ಎಲ್ಲರೊಂದಿಗೆ ಸಮಾಲೋಚಿಸಿದ್ದೇನೆ, ಚರ್ಚಿಸಿದ್ದೇನೆ. ಸಿದ್ಧತೆ ನಿರೀಕ್ಷಿತ ಮಟ್ಟದಲ್ಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಜಿಪಂ ಅಧ್ಯಕ್ಷ ದಿನಕರಬಾಬು, ಉಪಾದ್ಯಕ್ಷೆ ಶೀಲಾ ಕೆ.ಶೆಟ್ಟಿ, ಡಿಡಿಪಿಐ ಶೇಷಶಯನ ಕಾರಿಂಜ ಮುಂತಾದವರು ಉಪಸ್ಥಿತರಿದ್ದರು.

‘ಸಾಫ್ಟ್‌ಕಾರ್ನರ್ ಖಾಸಗಿಯವರ ಮೇಲಲ್ಲ; ಸರಕಾರಿ ಶಾಲೆ ಮೇಲೆ’

ಖಾಸಗಿ ವಿದ್ಯಾಸಂಸ್ಥೆಗಳ ಮೇಲಿನ ಸಾಫ್‌ಟ್ಕಾರ್ನರ್‌ನಿಂದಾಗಿ ನೀವು ಮಕ್ಕಳ ಪರವಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ ಯಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ನನಗೆ ಸಾಫ್ಟ್‌ಕಾರ್ನರ್ ಇರುವುದು ಖಾಸಗಿ ಶಾಲೆಯವರ ಮೇಲಲ್ಲ, ಬದಲಿಗೆ ಸರಕಾರಿ ಶಾಲೆಗಳು ಹಾಗೂ ಅದರಲ್ಲಿ ಕಲಿಯುವ ಸರಕಾರಿ ಶಾಲೆಗಳ ಮಕ್ಕಳ ಮೇಲೆ ಎಂದರು.

ನನ್ನ ಮೇಲೆ ಶಿಕ್ಷಣ ಇಲಾಖೆಯ ಋಣವಿದೆ. ಏಕೆಂದರೆ ನನ್ನ ತಾಯಿ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದವರು. ಹೀಗಾಗಿ ಸರಕಾರಿ ಶಾಲೆಯ ಅಭಿವೃದ್ಧಿ ನನ್ನ ಗುರಿ. ಹೀಗಾಗಿ ಯಾವುದೇ ಲಾಭಕ್ಕೆ ಶರಣಾಗಿ, ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಳ್ಳುವ ಪ್ರಮೇಯವೇ ಇಲ್ಲ ಎಂದು ಸುರೇಶ್ ಕುಮಾರ ನುಡಿದರು. ಸರಕಾರಿ ಶಾಲೆಗಳ ಸಬಲೀಕರಣ ನನ್ನ ಗುರಿ ಹಾಗೂ ಆದ್ಯತೆ. ಎಲ್ಲರೂ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವಂತೆ ಮಾಡುತ್ತೇನೆ ಎಂದರು.

ಆನ್‌ಲೈನ್ ಶಿಕ್ಷಣ, ಬುಧವಾರ ಅಂತಿಮ ನಿರ್ಧಾರ

ಕಳೆದ ಕೆಲವು ದಿನಗಳಿಂದ ಆನ್‌ಲೈನ್ ಶಿಕ್ಷಣದ ಕುರಿತು ಭಾರೀ ಚರ್ಚೆ ಗಳಾಗುತ್ತಿವೆ. ಈ ಕುರಿತು ಚರ್ಚಿಸಲು ನಿನ್ನೆ ಕರೆದ ಸಭೆ ಅಪೂರ್ಣವಾಗಿದೆ. ನಾಳೆ ಮತ್ತೆ ಸಭೆ ಕರೆದಿದ್ದು, ಆನ್‌ಲೈನ್ ಶಿಕ್ಷಣದ ಕುರಿತಂತೆ ವಿಸ್ತೃತ ಚರ್ಚೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದರು.

ಬೇಸರದ ಸಂಗತಿ ಎಂದರೆ ಈಗ ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಎಲ್‌ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಒಳ್ಳೆಯದಲ್ಲ. ಇದು ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯವಿದೆ. ಈ ಬಗ್ಗೆ ನಮ್ಮ ಕೋರಿಕೆಯಂತೆ ನಿಮ್ಹಾನ್ಸ್‌ನಿಂದ ವಿಸ್ತೃತವಾದ ವರದಿಯೊಂದನ್ನು ಸರಕಾರ ಪಡೆದಿದೆ.

ಆನ್‌ಲೈನ್ ಶಿಕ್ಷಣದಿಂದ ಮಕ್ಕಳೊಂದಿಗೆ ಪೋಷಕರ ಮೇಲೂ ಒತ್ತಡ ಬೀಳುತ್ತಿದೆ. ಇವುಗಳೆಲ್ಲದರ ಬಗ್ಗೆ ನಾಳೆ ವಿವರವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಭೆಗೆ ನಿಮ್ಹಾನ್ಸ್‌ನ ಮಕ್ಕಳ ತಜ್ಞರು, ಮಕ್ಕಳ ಸೈಕಾಲಜಿಸ್ಟ್‌ಗಳನ್ನು ಕರೆಯಲಾಗಿದೆ. ಒಟ್ಟಿನಲ್ಲಿ ಆನ್‌ಲೈನ್ ಶಿಕ್ಷಣ ಎಂಬುದು ಪೋಷಕರಿಂದ ಹಣ ಸುಲಿಯಲು ಇನ್ನೊಂದು ಮಾರ್ಗ ಆಗಬಾರದು ಎಂದು ಸುರೇಶ್ ಕುಮಾರ್ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News