×
Ad

ದ.ಕ. ಜಿಲ್ಲೆಯಲ್ಲಿ ಇಂದು 23 ಮಂದಿಗೆ ಕೊರೋನ ಪಾಸಿಟಿವ್

Update: 2020-06-09 20:00 IST

ಮಂಗಳೂರು, ಜೂ. 9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಬರೋಬ್ಬರಿ 23 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 18 ಮಂದಿ ಸೌದಿ ಅರೇಬಿಯದಿಂದ ಬಂದವರಾಗಿದ್ದರೆ, ಮೂವರು ದುಬೈನಿಂದ, ಇಬ್ಬರು ಮುಂಬೈನಿಂದ ಆಗಮಿಸಿದವರು ಎಂದು ತಿಳಿದುಬಂದಿದೆ.

ಗಲ್ಫ್ ನಂಟು: ಜೂ. 2ರಂದು ಸೌದಿ ಅರೇಬಿಯದಿಂದ ಮಂಗಳೂರಿಗೆ ಆಗಮಿಸಿದ್ದ 18 ಮಂದಿಯನ್ನು ನಗರದ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿಯಲ್ಲಿ ಸೋಂಕು ಇರುವುದು ಖಚಿತವಾಗಿದ್ದು, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೌದಿಯಿಂದ ಬಂದವರೆಲ್ಲರೂ 22ರಿಂದ 31 ವರ್ಷದೊಳಗಿನ ಯುವಕರು.

ಜೂ.1ರಂದು ದುಬೈನಿಂದ ಆಗಮಿಸಿದ್ದ ಮೂವರನ್ನು (30, 38 ಹಾಗೂ 32 ವರ್ಷದ ಪುರುಷರು) ನಗರದ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನ ಸೋಂಕಿತರ ಪೈಕಿ 21 ಮಂದಿಗೆ ಗಲ್ಫ್ ನಂಟಿದೆ.

ಮುಂಬೈನಿಂದ ಇಬ್ಬರು: ಮೇ 20ರಂದು ಮುಂಬೈನಿಂದ ಆಗಮಿಸಿದ್ದ 46 ವರ್ಷದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರ ಇವರು ಮೂಡುಬಿದಿರೆಗೆ ತೆರಳಿದ್ದರು. ಇವರ ಗಂಟಲು ದ್ರವ ಮಾದರಿಯಲ್ಲಿ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೇ 13ರಂದು ಪುಣೆಯಿಂದ ಆಗಮಿಸಿದ್ದ 46 ವರ್ಷದ ವ್ಯಕ್ತಿಯನ್ನು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಬಳಿಕ ಬಂಟ್ವಾಳಕ್ಕೆ ತೆರಳಿದ್ದರು. ಇವರ ಗಂಟಲು ದ್ರವ ಮಾದರಿಯಲ್ಲಿ ಸೊಂಕು ಇರುವುದು ಖಚಿತಗೊಂಡ ನಂತರ ವೆನ್ಲಾಕ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

16 ಮಂದಿ ಕೊರೋನ ಮುಕ್ತ

ಕೊರೋನ ಸೋಂಕಿತರು ನಿತ್ಯವೂ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಮಂಗಳವಾರ 16 ಮಂದಿ (16 ವರ್ಷದ ಬಾಲಕ, 10 ಪುರುಷರು, ಐವರು ಸ್ತ್ರೀಯರು) ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇದುವರೆಗೆ 115 ಮಂದಿ ಗುಣಮುಖರಾದಂತಾಗಿದೆ. ಸದ್ಯ 96 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಒಟ್ಟು 199 ಗಂಟಲು ದ್ರವ ಮಾದರಿ ವರದಿಗಳು ಬಂದಿದ್ದು, ಇದರಲ್ಲಿ 23 ಪಾಸಿಟಿವ್. ಇನ್ನುಳಿದ 176 ವರದಿಗಳು ನೆಗೆಟಿವ್ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News