×
Ad

ಉಡುಪಿ: ಕೊರೋನ ಪಾಸಿಟಿವ್ ಪ್ರಕರಣಗಳಿಲ್ಲದ ಅಪರೂಪದ ದಿನ

Update: 2020-06-09 21:37 IST

ಉಡುಪಿ, ಜೂ.9: ಮೇ 14ರ ಬಳಿಕ ಇಂದು ಮೊದಲ ಬಾರಿ ಉಡುಪಿ ಜಿಲ್ಲೆ, ನೋವೆಲ್ ಕೊರೋನ ವೈರಸ್‌ನ(ಕೋವಿಡ್-19) ಸೋಂಕಿತ ರಿಲ್ಲದ ದಿನವನ್ನು ಇಂದು ಕಾಣುವಂತಾಯಿತು. ರಾಜ್ಯ ಆರೋಗ್ಯ ಇಲಾಖೆಯ ಮಂಗಳವಾರ ಸಂಜೆಯ ವರದಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ಒಂದು ಪಾಸಿಟಿವ್ ಪ್ರಕರಣವಿಲ್ಲದೇ ಪಟ್ಟಿಯಲ್ಲಿ ‘ಶೂನ್ಯ’ ಕಾಣಿಸಿ ಕೊಂಡಿತು. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 946ಕ್ಕೆ ನಿಂತಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ಮಂಗಳವಾರ ಸಂಜೆ ಬಿಡುಗಡೆಗೊಳಿಸಿದ ಕೋವಿಡ್-19 ವರದಿಯಲ್ಲಿ ಒಟ್ಟು 30 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. ಆದರೆ ಇಲಾಖೆ ಮೂಲಗಳು ಹೇಳುವಂತೆ ರಾತ್ರಿಯವರೆಗೆ ಗುಣಮುಖರಾಗಿ ವರದಿ ನೆಗೆಟಿವ್ ಬಂದ ಒಟ್ಟು 110 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

ಈ ಮೂಲಗಳ ಪ್ರಕಾರ ಇಂದು ಕೊಲ್ಲೂರು ಕೋವಿಡ್ ಆಸ್ಪತ್ರೆಯಿಂದ 51 ಮಂದಿ, ಕುಂದಾಪುರದ ಆಸ್ಪತ್ರೆಯಿಂದ 42 ಮಂದಿ, ಕಾರ್ಕಳದಿಂದ 8 ಮಂದಿ ಹಾಗೂ ಉಡುಪಿ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಿಂದ 9 ಮಂದಿ ಬಿಡುಗಡೆಗೊಂಡಿದ್ದಾರೆ ಎಂದು ಹೇಳಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಅವರ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 946 ಮಂದಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಇಂದು 30 ಮಂದಿ ಸೇರಿದಂತೆ ಒಟ್ಟು 304 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. ಇನ್ನು 641 ಸಕ್ರೀಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇವರಿಗೆಲ್ಲ ಚಿಕಿತ್ಸೆ ಮುಂದುವರಿದಿದೆ.

ಆದರೂ ಉಡುಪಿ ಜಿಲ್ಲೆ ಈಗಲೂ 946 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ನಂತರದ ಸ್ಥಾನದಲ್ಲಿರುವ ಕಲಬುರಗಿಯಲ್ಲಿ ಒಟ್ಟು 769, ಇಂದು ಅತ್ಯಧಿಕ ಅಂದರೆ 61 ಪ್ರಕರಣಗಳು ಪತ್ತೆಯಾದ ಯಾದಗಿರಿ ಜಿಲ್ಲೆ 642, ಬೆಂಗಳೂರು ನಗರ 522 ಪಾಸಿಟಿವ್ ಪ್ರಕರಣ ಗೊಂದಿಗೆ ನಂತರದ ಸ್ಥಾನಗಳಲ್ಲಿವೆ.

12 ಸ್ಯಾಂಪಲ್ ನೆಗೆಟಿವ್: ಮಂಗಳವಾರ 12 ಸ್ಯಾಂಪಲ್‌ಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ.ಇಂದು ಕೋವಿಡ್-19 ರೋಗದ ಗುಣ ಲಕ್ಷಣವಿರುವ 17 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರೆಲ್ಲರೂ ಶೀತಜ್ವರದಿಂದ ಬಳಲುವವರಾಗಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಹೀಗಾಗಿ ಈವರೆಗೆ ಸಂಗ್ರಹಿಸಿದ 12,557 ಗಂಟಲು ದ್ರವದ ಮಾದರಿಗಳಲ್ಲಿ ಇಂದು ಸಂಜೆಯವರೆಗೆ ಒಟ್ಟು 12,557ರ ವರದಿ ಬಂದಿವೆ. ಇದರಲ್ಲಿ 11,578 ನೆಗೆಟಿವ್ ಆಗಿದ್ದರೆ, ಒಟ್ಟು 946 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನು ಕೇವಲ 33 ಸ್ಯಾಂಪಲ್‌ಗಳ ವರದಿಯ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯಲ್ಲೀಗ 641 ಸಕ್ರೀಯ ಪ್ರಕರಣಗಳಿವೆ ಎಂದವರು ಹೇಳಿದರು.

ಇಂದು ರೋಗದ ಗುಣಲಕ್ಷಣದೊಂದಿಗೆ ಮೂವರು ಪುರುಷರು ಹಾಗೂ ಐವರು ಮಹಿಳೆಯರು ಸೇರಿ ಒಟ್ಟು 8 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಕೊರೋನ ಶಂಕಿತರು ಮೂವರು, ಉಸಿರಾಟದ ತೊಂದರೆಯವರು ನಾಲ್ವರು ಹಾಗೂ ಶೀತಜ್ವರದ ಒಬ್ಬರು ಸೇರಿದ್ದಾರೆ.

ಇಂದು ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ 7 ಮಂದಿ ಬಿಡುಗಡೆಗೊಂಡಿದ್ದು, 82 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 59 ಮಂದಿ ಮಂಗಳವಾರ ನೊಂದಣಿ ಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5232 ಮಂದಿ ಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4472ಮಂದಿ (ಇಂದು 78) 28 ದಿನಗಳ ನಿಗಾವಣೆ ಹಾಗೂ 4843 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗಲೂ 305 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 185 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದರು.

ಇನ್ನೂ ಗಂಭೀರ: ಮುಂಬೈಯಿಂದ ಆಗಮಿಸಿ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಮನೆಗೆ ಕಳುಹಿಸಲ್ಪಟ್ಟು ಕಳೆದ ಶನಿವಾರ ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆಗಾಗಿ ಉಡುಪಿ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬೈಂದೂರಿನ 47ರ ಹರೆಯದ ಪುರುಷರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಅವರಿಗೀಗಲೂ ವೆಂಟಿಲೇಟರ್‌ನಲ್ಲೇ ಇದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News