ಜಗತ್ತಿನಾದ್ಯಂತ ಬಿಗಡಾಯಿಸುತ್ತಿರುವ ಕೊರೋನ ವೈರಸ್ ಪರಿಸ್ಥಿತಿ
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜೂ. 9: ಜಗತ್ತಿನಾದ್ಯಂತ ಕೊರೋನ ವೈರಸ್ ಸಾಂಕ್ರಾಮಿಕ ಪರಿಸ್ಥಿತಿಯು ದಿನಗಳೆದಂತೆ ಬಿಗಡಾಯಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಹೇಳಿದೆ ಹಾಗೂ ಈ ವಿಷಯದಲ್ಲಿ ನೆಮ್ಮದಿಯ ಭಾವನೆಯನ್ನು ಹೊಂದದಂತೆ ಅದು ಎಚ್ಚರಿಸಿದೆ.
ಅಮೆರಿಕ ಖಂಡಗಳಲ್ಲಿ ಕೋವಿಡ್-19 ಸಾಂಕ್ರಾಮಿಕವು ಈಗ ತಾಂಡವವಾಡುತ್ತಿದೆ ಹಾಗೂ ದಾಖಲೆಯ ಒಂದು ದಿನದ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಅದು ಹೇಳಿದೆ.
ಅದೇ ವೇಳೆ, ಯಾರಾದರೂ ಸಾಮೂಹಿಕ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದರೆ, ಸುರಕ್ಷಿತ ವಿಧಾನದಲ್ಲಿ ಹಾಗೆ ಮಾಡುವಂತೆ ಅದು ಕರೆ ನೀಡಿದೆ. ಅಮೆರಿಕದಲ್ಲಿ ಪೊಲೀಸ್ ಬಂಧನದ ವೇಳೆ, ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡಾ ಸಾವಿಗೀಡಾದ ಬಳಿಕ ಅಮೆರಿಕ ಮತ್ತು ವಿಶ್ವಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಅದು ಈ ಸಲಹೆ ನೀಡಿದೆ.
ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಈವರೆಗೆ 4,03,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 70 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಮೊದಲು ಪೂರ್ವ ಏಶ್ಯದಲ್ಲಿ ದಾಂಧಲೆ ನಡೆಸಿದ ಸಾಂಕ್ರಾಮಿಕವು ಬಳಿಕ ಯುರೋಪ್‌ನ್ನು ಪ್ರವೇಶಿಸಿತು. ಈಗ ಅದು ಅಮೆರಿಕ ಖಂಡಗಳಲ್ಲಿ ತನ್ನ ಪ್ರತಾಪವನ್ನು ತೋರಿಸುತ್ತಿದೆ.
‘‘ಯುರೋಪ್‌ನಲ್ಲಿ ಪರಿಸ್ಥಿತಿ ಸುಧಾರಿಸಿದರೂ ಜಾಗತಿಕವಾಗಿ ಪರಿಸ್ಥಿತಿಯು ಬಿಗಡಾಯಿಸುತ್ತಿದೆ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಸೋಮವಾರ ಜಿನೀವದಲ್ಲಿ ನಡೆದ ವೀಡಿಯೊ ಕಾನ್ಫರೆನ್ಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.