ಫ್ಲಾಯ್ಡ್ ಹಂತಕ ಪೊಲೀಸ್ ಅಧಿಕಾರಿಯ ಜಾಮೀನಿಗೆ 7.55 ಕೋಟಿ ರೂ. ಮೌಲ್ಯ
ಮಿನಪೊಲಿಸ್ (ಅಮೆರಿಕ), ಜೂ. 9: ಅಮೆರಿಕದ ಮಿನಪೊಲಿಸ್‌ನಲ್ಲಿ ಇತ್ತೀಚೆಗೆ ಜಾರ್ಜ್ ಫ್ಲಾಯ್ಡ್ ಎಂಬ ಕರಿಯ ವ್ಯಕ್ತಿಯ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್‌ರ ಜಾಮೀನು ಬಿಡುಗಡೆಗೆ ನಗರದ ನ್ಯಾಯಾಧೀಶರೊಬ್ಬರು ಒಂದು ಮಿಲಿಯ ಡಾಲರ್ (ಸುಮಾರು 7.55 ಕೋಟಿ ರೂಪಾಯಿ) ಭದ್ರತಾ ಠೇವಣಿಯನ್ನು ನಿಗದಿಪಡಿಸಿದ್ದಾರೆ.
46 ವರ್ಷದ ಫ್ಲಾಯ್ಡ್ ರನ್ನು ಕೊಂದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ. ಅವರ ವಿರುದ್ಧ ಒಂದು ಎರಡನೇ ಡಿಗ್ರಿ ಕೊಲೆ, ಒಂದು ಮೂರನೇ ಡಿಗ್ರಿ ಕೊಲೆ ಮತ್ತು ಒಂದು ಮಾನವಹತ್ಯೆ ಆರೋಪಗಳನ್ನು ಹೊರಿಸಲಾಗಿದೆ. ಅವರನ್ನು ಮಿನಸೋಟ ರಾಜ್ಯದ ಬಂಧೀಖಾನೆಯಿಂದ ವೀಡಿಯೊ ಮೂಲಕ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು.
ಕಿತ್ತಳೆ ಬಣ್ಣದ ಜೈಲಿನ ಉಡುಗೆಯಲ್ಲಿದ್ದ 44 ವರ್ಷದ ಶಾವಿನ್, ನಿಯಮಾವಳಿಗಳಂತೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಹೆನ್‌ಪಿನ್ ಕೌಂಟಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಜೀನಿಸ್ ರೆಡಿಂಗ್ ಶರತ್ತುಗಳಿಗೊಳಪಟ್ಟು ಒಂದು ಮಿಲಿಯ ಡಾಲರ್ ಮೊತ್ತದ ಜಾಮೀನು ಮತ್ತು ಶರತ್ತುಗಳಿಲ್ಲದೆ 1.25 ಮಿಲಿಯ ಡಾಲರ್ (ಸುಮಾರು 9.44 ಕೋಟಿ ರೂಪಾಯಿ) ಮೊತ್ತದ ಜಾಮೀನು ನಿಗದಿಪಡಿಸಿದರು.
ತನ್ನ ಬಂದೂಕುಗಳನ್ನು ಒಪ್ಪಿಸುವುದು, ಯಾವುದೇ ನೆಲೆಯಲ್ಲಿ ಕಾನೂನು ಅನುಷ್ಠಾನ ಅಥವಾ ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡದಿರುವುದು, ರಾಜ್ಯದಿಂದ ಹೊರಗೆ ಹೋಗದಿರುವುದು ಹಾಗೂ ಫ್ಲಾಯ್ಡ್ ಕುಟುಂಬದೊಂದಿಗೆ ಯಾವುದೇ ಸಂಪರ್ಕ ಹೊಂದದಿರುವುದು- ಇವು ಶಾವಿನ್‌ಗೆ ನ್ಯಾಯಾಲಯ ವಿಧಿಸಿರುವ ಶರತ್ತುಗಳಾಗಿವೆ.
ಮುಂದಿನ ವಿಚಾರಣೆ ಜೂನ್ 29ರಂದು ನಡೆಯಲಿದೆ.