×
Ad

ಉಡುಪಿಯಲ್ಲಿದ್ದ ಅಶ್ರಫ್‌ರನ್ನು ಸೂಕ್ತ ವ್ಯವಸ್ಥೆ ಕಲ್ಪಿಸಿ ಕರೆಸಿಕೊಂಡ ಕಾಸರಗೋಡು ಜಿಲ್ಲಾಡಳಿತ !

Update: 2020-06-09 22:37 IST

ಉಡುಪಿ, ಜೂ. 9: ಕಳೆದ ಒಂದು ತಿಂಗಳಿಂದ ಉಡುಪಿಯ ಬನ್ನಂಜೆಯ ಸಾಂಸ್ಥಿಕ ಕ್ವಾರಂಟೇನ್ ಕೇಂದ್ರದಲ್ಲಿದ್ದ ನಿರ್ಗತಿಕ ಕಾಸರಗೋಡಿನ ಅಶ್ರಫ್ (68) ಎಂಬವರನ್ನು ಸ್ವತಃ ಕಾಸರಗೋಡು ಜಿಲ್ಲಾಡಳಿತವೇ ಸೂಕ್ತ ವ್ಯವಸ್ಥೆ ಕಲ್ಪಿಸಿ, ಸೋಮವಾರ ಕಾಸರಗೋಡಿಗೆ ಕರೆಸಿಕೊಂಡಿದೆ.

ಕೆಲವು ದಿನಗಳ ಹಿಂದೆ ಅಸಹಾಯಕರಾಗಿ ಪತ್ತೆಯಾಗಿದ್ದ ಕಾಸರಗೋಡಿನ ಅಶ್ರಫ್ ಅವರನ್ನು ಕೊರೋನ ಸಂಬಂಧಿ ಸಾಂಸ್ಥಿಕ ಕ್ವಾರಂಟೇನ್ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅವರ ಕ್ವಾರಂಟೇನ್ ಅವಧಿ ಮುಗಿದರೂ ವಾರಸು ದಾರರಿಲ್ಲದೇ ಅವರು ಅಲ್ಲೇ ಉಳಿದುಕೊಂಡಿದ್ದರು. ಈ ಮಧ್ಯೆ ಕ್ವಾರಂಟೇನ್ ಕೇಂದ್ರದಲ್ಲಿದ್ದ ಅಶ್ರಫ್ ಅನಾರೋಗ್ಯಕ್ಕೆ ಒಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಆ ಸಂದರ್ಭ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸ ಲಾಗಿತ್ತು. ಈ ವರದಿ ನೆಗೆಟಿವ್ ಬಂದಿತ್ತು. ಆಸ್ಪತ್ರೆಯಿಂದ ಮತ್ತೆ ಕೇಂದ್ರಕ್ಕೆ ಬಂದ ಇವರು, ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಭಾಷಾ ಸಮಸ್ಯೆ ಕೂಡ ಅಡ್ಡಿಯಾಗಿತ್ತು. ಉಡುಪಿ ಜಿಲ್ಲಾಡಳಿತ ಅಶ್ರಫ್‌ರನ್ನು ಅವರ ಊರಿಗೆ ಕಳುಹಿ ಸಲು ಕಾಸರಗೋಡು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ, ವಿಳಾಸ ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನಪಟ್ಟಿತ್ತು.

ಇದೀಗ ಕಾಸರಗೋಡು ಜಿಲ್ಲಾಡಳಿತವೇ ಪೊಲೀಸ್ ಇಲಾಖೆಯ ಮೂಲಕ ಅಶ್ರಫ್‌ರನ್ನು ಉಡುಪಿಯಿಂದ ಕಾಸರಗೋಡಿಗೆ ಕರೆಸಿಕೊಳ್ಳುವ ಕೆಲಸ ಮಾಡಿದೆ. ಕಾಸರಗೋಡು ಪೊಲೀಸ್ ಉಪವಿಭಾಗದ ಡಿವೈಎಸ್ಪಿಯ ಪತ್ರದೊಂದಿಗೆ ಪೊಲೀಸ್ ಸಿಬ್ಬಂದಿ ಮತ್ತು ಚಾಲಕ ಆ್ಯಂಬುಲೆನ್ಸ್ ನಲ್ಲಿ ಉಡುಪಿಗೆ ಆಗಮಿಸಿ, ಕ್ವಾರಂಟೇನ್ ಕೇಂದ್ರದ ಮೇಲ್ವಿಚಾರಕಿ ಸಮಾಜ ಕಲ್ಯಾಣ ಇಲಾಖೆಯ ಸುಚಿತ್ರಾ ಸಂತೋಷ್ ಅವರಿಂದ ಬಿಡುಗಡೆ ಪತ್ರ ಪಡೆದು ಅಶ್ರಫ್‌ರನ್ನು ಕರೆದು ಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News