‘ಕೊರೋನ ಎಕ್ಸ್‌ಪ್ರೆಸ್’ ಹೇಳಿಕೆ ಮೂಲಕ ಮಮತಾ ಬ್ಯಾನರ್ಜಿ ಕಾರ್ಮಿಕರನ್ನು ಅವಮಾನಿಸಿದ್ದಾರೆ: ಅಮಿತ್ ಶಾ

Update: 2020-06-09 17:10 GMT

ಕೋಲ್ಕತಾ, ಜೂ.9: ಶ್ರಮಿಕ್ ವಿಶೇಷ ರೈಲುಗಳನ್ನು ಕೊರೋನ ಎಕ್ಸ್‌ಪ್ರೆಸ್ ಎಂದು ಕರೆದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಲಸೆ ಕಾರ್ಮಿಕರನ್ನು ಅವಮಾನಿಸಿದ್ದಾರೆ. ಈ ಹೇಳಿಕೆ ಪಶ್ಚಿಮ ಬಂಗಾಳದಿಂದ ಟಿಎಂಸಿಯ ನಿರ್ಗಮನಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

2021ರಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಪ್ರಚಾರಕಾರ್ಯಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿ ಮಾತನಾಡಿದ ಶಾ, ಮಮತಾಜೀ, ಲಾಕ್‌ಡೌನ್ ಸಂದರ್ಭ ವಲಸೆ ಕಾರ್ಮಿಕರನ್ನು ಬಂಗಾಳಕ್ಕೆ ಕರೆತರುವ ಶ್ರಮಿಕ್ ವಿಶೇಷ ರೈಲುಗಳನ್ನು ‘ಕೊರೋನ ಎಕ್ಸ್‌ಪ್ರೆಸ್’ ಎಂದು ಕರೆಯುವ ಮೂಲಕ ನೀವು ವಲಸೆ ಕಾರ್ಮಿಕರಿಗೆ ಅವಮಾನ ಮಾಡಿದ್ದೀರಿ. ಅವರ ಗಾಯಕ್ಕೆ ಉಪ್ಪೆರಚಿದ್ದೀರಿ. ಇದನ್ನು ಅವರು ಎಂದಿಗೂ ಮರೆಯುವುದಿಲ್ಲ ಎಂದರು.

ಕೇಂದ್ರ ಸರಕಾರದ ವಿರುದ್ಧ ಸದಾ ದ್ವೇಷ ಕಾರುತ್ತಿರುವ ಮಮತಾ, ಕೇಂದ್ರ ಸರಕಾರದ ಹಲವು ಯೋಜನೆಗಳನ್ನು ಪಶ್ಚಿಮ ಬಂಗಾಳದ ಜನತೆಗೆ ಸಿಗದಂತೆ ತಡೆದಿದ್ದಾರೆ ಎಂದು ಆರೋಪಿಸಿದ ಶಾ, ರಾಜ್ಯ ಸರಕಾರದ ಸಾಧನೆಯ ಬಗ್ಗೆ ಕೇಂದ್ರಕ್ಕೆ ತೃಪ್ತಿಯಿಲ್ಲದಿದ್ದರೆ ಸರಕಾರವನ್ನು ವಜಾಗೊಳಿಸಬಹುದು ಎಂಬ ಮಮತಾರ ಹೇಳಿಕೆಯನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನತೆ ಈಡೇರಿಸಲಿದ್ದಾರೆ ಎಂದರು.

ಕೃಷಿಕ್ ಸಮ್ಮಾನ್ ನಿಧಿ ಯೋಜನೆಯ ವ್ಯಾಪ್ತಿಗೆ ಬರುವ ರೈತರ ಪಟ್ಟಿಯನ್ನು ಕಳಿಸಲು ಮಮತಾ ನಿರಾಕರಿಸುತ್ತಿದ್ದು ಇದರಿಂದ ರಾಜ್ಯದ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ ಬಂಗಾಳದಲ್ಲಿ ಮಮತಾ ಸರಕಾರ ಮಾಡಿರುವ ಸಾಧನೆಯ ವಿವರ ನೀಡಲಿ ಎಂದು ಶಾ ಹೇಳಿದರು. ಮಮತಾ ಪೌರತ್ವ ಕಾಯ್ದೆಯನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ವಿರೋಧಿಸಿ ರಸ್ತೆಗಿಳಿದು ರ್ಯಾಲಿ ನಡೆಸಿದರು. ಬಾಂಗ್ಲಾದೇಶದ ನಿರಾಶ್ರಿತ ಬಂಗಾಳಿ ಸಹೋದರರು ಅವರಿಗೇನಾದರೂ ತೊಂದರೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಶಾ, ಈ ರೀತಿಯ ಕ್ರಮಗಳಿಂದ ಅವರು ಬಂಗಾಳದಲ್ಲಿ ರಾಜಕೀಯ ನಿರಾಶ್ರಿತರಾಗಲಿದ್ದಾರೆ ಎಂದರು. ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆಯಿಂದ ದೇಶದ ಸುಮಾರು 50 ಕೋಟಿ ಜನತೆ ಪ್ರಯೋಜನ ಪಡೆದಿದ್ದಾರೆ.

ದಿಲ್ಲಿಯ ಕೇಜ್ರಿವಾಲ್ ಸರಕಾರ ಕೂಡಾ ಇದನ್ನು ಜಾರಿಗೊಳಿಸಿದೆ. ಆದರೆ ಮಮತಾರಿಂದಾಗಿ ಬಂಗಾಳದ ಜನತೆಗೆ ಈ ಯೋಜನೆಯ ಸೌಲಭ್ಯ ದೊರಕುತ್ತಿಲ್ಲ. ಬಂಗಾಳದ ಬಡವರಿಗೆ ಕಡಿಮೆ ವೆಚ್ಚದ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಪಡೆಯುವ ಹಕ್ಕು ಇಲ್ಲವೇ. ರಾಜ್ಯದಲ್ಲಿ ಪ್ರಧಾನಿ ಮೋದಿಯ ಜನಪ್ರಿಯತೆ ಹೆಚ್ಚುತ್ತದೆ ಎಂಬ ಭಯ ಕಾಡುತ್ತಿದೆಯೇ. ರಾಜಕೀಯ ಮಾಡಲು ಹಲವು ವಿಷಯಗಳಿವೆ ಎಂದ ಶಾ, ವಿಧಾನಸಭೆ ಚುನಾವಣೆ ನಡೆದು ಬಿಜೆಪಿಯ ಮುಖ್ಯಮಂತ್ರಿಯ ಆಯ್ಕೆಯಾದ ಮರುಕ್ಷಣವೇ ಪಶ್ಚಿಮ ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News