×
Ad

ದೇರಳಕಟ್ಟೆ: ಸಾರ್ವಜನಿಕ ಸ್ಥಳದಲ್ಲಿ ಪಾನ್ ತಿಂದವರ ವಿರುದ್ಧ ಪ್ರಕರಣ ದಾಖಲು

Update: 2020-06-09 23:00 IST

ಮಂಗಳೂರು, ಜೂ.9: ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಮಸಾಲ ತಿನ್ನುವವರ ವಿರುದ್ಧ ನಗರ ಹೊರವಲಯದ ದೇರಳಕಟ್ಟೆಯಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, 32 ಮಂದಿಯ ವಿರುದ್ಧ ಕೇಸು ದಾಖಲಿಸಿದ್ದಾರೆ.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ತಂಡವು ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಕೋಪ್ಟಾ -2003 ಕಾಯ್ದೆ ಉಲ್ಲಂಘನೆಯ ವಿರುದ್ಧ ನಗರದ ಹೊರವಲಯದ ದೇರಳಕಟ್ಟೆ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿತು.

ಈ ಸಂದರ್ಭ ಬಸ್‌ಸ್ಟಾಂಡ್, ರಸ್ತೆ ಬದಿ ಮತ್ತು ಅಂಗಡಿ ವಠಾರ ಮತ್ತಿತರ ಸ್ಥಳಗಳಲ್ಲಿ ಹಲವು ಮಂದಿ ಬಹಿರಂಗವಾಗಿಯೇ ಪಾನ್ ಮಸಾಲೆ ಹಾಗೂ ತಂಬಾಕು ಉತ್ಪನ್ನಗಳನ್ನು ತಿನ್ನುತ್ತಿದ್ದುದು ಕಂಡು ಬಂತು. ಅಂತಹವರ ವಿರುದ್ಧ ಸ್ಥಳದಲ್ಲಿಯೇ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಒಟ್ಟು 32 ಪ್ರಕರಣ ದಾಖಲಿಸಿ 3,100 ರೂ. ದಂಡ ವಿಧಿಸಲಾಯಿತು.

ಅಲ್ಲದೆ ಕೋಪ್ಟಾ ಕಾಯ್ದೆಯ ಕುರಿತಂತೆ ಅಂಗಡಿ ಹಾಗೂ ಹೊಟೇಲ್ ಮಾಲಕರಿಗೆ ಮಾಹಿತಿ ನೀಡಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಮಸಾಲ ಹಾಗೂ ತಂಬಾಕು ಉತ್ಪನ್ನಗಳನ್ನು ತಿನ್ನದಂತೆ ಗ್ರಾಹಕರಿಗೆ ಸೂಚಿಸಲು ಅಂಗಡಿ ಮಾಲಕರಿಗೆ ಸೂಚಿಸಲಾಯಿತು.

ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳನ್ನು ಜಗಿದು ಉಗಿಯುವುದರಿಂದ ಕೋವಿಡ್-19 ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಇತರರಿಗೆ ಹರಡುವ ಸಂಭವ ಅಧಿಕವಾಗಿದೆ. ಪ್ರಸಕ್ತ ಕೋವಿಡ್ ವ್ಯಾಪಕವಾಗಿರುವುದರಿಂದ ಈ ರೀತಿ ಪಾನ್ ಮಸಾಲೆ ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಹೆಚ್ಚು ಅಪಾಯಕಾರಿಯಾಗಿದೆ. ಇಂತಹ ಉಗುಳನ್ನು ಇತರ ಸಾರ್ವಜನಿಕರಿಗೆ ನಡೆದುಕೊಂಡು ಹೋಗುವಾಗ ಗೊತ್ತಿಲ್ಲದೆ ಮೆಟ್ಟುವುದರಿಂದ ಇದು ಸಾಂಕ್ರಾಮಿಕ ರೋಗ ಹಬ್ಬಲೂ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿ ಹೇಳಿದರು.

ಕಾರ್ಯಾಚರಣೆಯಲ್ಲಿ ಹಿರಿಯ ಆಹಾರ ಸುರಕ್ಷತಾಧಿಕಾರಿ ರಾಜು, ಸಾಮಾಜಿಕ ಕಾರ್ಯಕರ್ತೆ ಶ್ರುತಿ ಸಾಲ್ಯಾನ್, ಕೊಣಾಜೆ ಠಾಣೆಯ ಎಸ್ಸೈ ಶರಣಪ್ಪ, ಸಿಬ್ಬಂದಿಗಳಾದ ಪುನೀತ್, ವಿದ್ಯಾಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News