×
Ad

ಪ್ರಾರ್ಥನಾ ಮಂದಿರಗಳಲ್ಲಿ ಕಟ್ಟುನಿಟ್ಟಿನ ಆದೇಶ ಪಾಲಿಸುವಂತೆ ಎಎಸ್ಪಿ ನಿಖಿಲ್ ನಿರ್ದೇಶನ

Update: 2020-06-09 23:15 IST

ಭಟ್ಕಳ: ಪ್ರತಿಯೋರ್ವರೂ ಕೂಡಾ ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಕಡ್ಡಾಯವಾಗಿದೆ ಎಂದು ಎ.ಎಸ್.ಪಿ. ನಿಖಿಲ್ ಬಿ., ಹೇಳಿದರು. 

ಅವರು ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಕರೆಯಲಾದ ದೇವಸ್ಥಾನ, ಮಸೀದಿ, ಚರ್ಚ ಆಡಳಿತ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು.

ಸರಕಾರದ ನಿರ್ದೇಶನದಂತೆ ಈಗಾಗಲೇ ದೇವಸ್ಥಾನ, ಮಸೀದಿ, ಚರ್ಚಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇಲ್ಲಿ ಸರಕಾರ ಮಾರ್ಗಸೂಚಿಯ ಉಲ್ಲಂಘನೆ ಪ್ರಕರಣ ಕಂಡು ಬಂದಲ್ಲಿ ಆಡಳಿತ ಕಮಿಟಿಯ ಮೇಲೆ ಕ್ರಮ ಕೈಗೊಳ್ಳಬೇಕಾಗುವುದ ಎಂದು ಎಚ್ಚರಿಸಿದರು. 
ದೇವಸ್ಥಾನ, ಚರ್ಚ ಹಾಗೂ ಮಸೀದಿಗೆ ಬರುವವರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡ ಬೇಕು ಜತೆಗೆ ಮಾಸ್ಕ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡಾ ಕಡ್ಡಾಯವಾಗಿದೆ ಎಂದರು. 10 ವರ್ಷದೊಳಗಿನ ಮಕ್ಕಳು, 65 ವರ್ಷದ ಮೇಲಿನ ವೃದ್ಧರು, ಗರ್ಭಿಣಿಯರು ಪ್ರಾರ್ಥನಾ ಸ್ಥಳಕ್ಕೆ ಬರುವುದನ್ನು ನಿಷೇಧಿಸಲಾಗಿದೆ ಈ ಎಲ್ಲಾ ಆದೇಶವನ್ನೂ ಧಾರ್ಮಿಕ ಕೇಂದ್ರಗಳ ಆಡಳಿತ ಮಂಡಳಿ ಪಾಲಿಸಬೇಕು ಎಂದರು.

ಸಹಾಯಕ ಆಯುಕ್ತ ಭರತ್ ಎಸ್., ಮಾತನಾಡಿ ಪಟ್ಟಣದಲ್ಲಿ ಸೊಷಿಯಲ್ ರಿಪೋರ್ಟಿಂಗ್ ಹೆಚ್ಚಾಗಬೇಕಾಗಿದೆ. ಪಟ್ಟಣಕ್ಕೆ ಹೊಸಬರು ಯಾರೇ ಬಂದರೂ ಅಧಿಕಾರಿಗಳಿಗೆ ತಿಳಿಸಬೇಕಾಗಿದ್ದು ಹೋಮ್ ಕ್ವಾರಂಟೈನ್‍ನಲ್ಲಿದ್ದವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು ಎಂದರು.

ಭಟ್ಕಳದಲ್ಲಿ ಲಾಕಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು  ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾ ಗಿದೆ. ಮುಂದೆ ಜನತೆಯ ಸಹಕಾರ ನೋಡಿ ಮತ್ತಷ್ಟು ಸಡಿಲಿಕೆ ಮಾಡಲಾಗುವುದು. ತಂಝೀಂ ಮುಖಂಡ ಇನಾಯತುಲ್ಲಾ ಶಾಬಂದ್ರಿ ಸಂಜೆ 7 ಗಂಟೆ ನಂತರ ಲಾಕಡೌನ್ ಇರುವುದರಿಂದ 8 ಗಂಟೆಯ ನಮಾಝ ಮಾಡಲು ತೊಂದರೆಯಾಗುತ್ತದೆ ಎಂದಾಗ,  ಸ್ವಲ್ಪ ದಿನ ಸಹಕಾರ ಕೊಡಿ ನಂತರ ಎಲ್ಲವೂ ಸರಿಯಾಗಲಿದೆ ಎಂದು ಎಎಸ್ಪಿ ಹೇಳಿದರು.

ವಿಶ್ವಹಿಂದೂ ಪರಿಷತ್ತಿನ  ಶಂಕರ ಶೆಟ್ಟಿ ಪಟ್ಟಣದಲ್ಲಿ ಮದುವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದಾಗ ಈ ಬಗ್ಗೆ ಜಿಲ್ಲಾಡಳಿತದ ಜತೆ ಚರ್ಚಿಸುವುದಾಗಿ ಸಹಾಯಕ ಆಯುಕ್ತ ಹೇಳಿದರು. 

ವಕೀಲರ ಸಂಘದ ಕಾರ್ಯದರ್ಶಿ  ಎಂ, ಜೆ, ನಾಯ್ಕ ಮಾತನಾಡಿ ಭಟ್ಕಳದಲ್ಲಿ ಕಂಟೈನ್‍ಮೆಂಟ್ ಝೋನ್ ಇದೆ ಎಂದು ನ್ಯಾಯಾಲಯಕ್ಕೆ ವಕೀಲರಿಗೂ ಹೋಗಲು ಬಿಡುತ್ತಿಲ್ಲ. ಕಂಟೈನ್‍ಮೆಂಟ್ ಜೋನ್ ಸಡಿಲಿಕೆ ಆಗಿದೆಯೇ ಎಂದು ಸ್ಪಷ್ಟಪಡಿಸಬೇಕು ಎಂದಾಗ ಸಹಾಯಕ ಆಯುಕ್ತರು ಭಟ್ಕಳದಲ್ಲಿ ಕಂಟೈನ್‍ಮೆಂಟ್ ಜೋನ್‍ನ್ನು ಸಡಿಲಿಕೆ ಮಾಡಲಾಗಿದೆ. ಕೆಲವೇ ಪ್ರದೇಶಗಳನ್ನು ಮಾತ್ರ ಕಂಟೈನ್‍ಮೆಂಟ್ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ನೀಡುವ ಭರವಸೆ ನೀಡಿದರು.

ತಂಝೀಂ ಅಧ್ಯಕ್ಷ ಎಸ್.ಎಂ. ಪರ್ವೇಝ್, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್. ನಾಯ್ಕ ಮಾತನಾಡಿದರು. ಸಭೆಯಲ್ಲಿ ತಹಸೀಲ್ದಾರ ರವಿಚಂದ್ರ, ಸಿಪಿಐ ದಿವಾಕರ ಸೇರಿದಂತೆ ದೇವಸ್ಥಾನ, ಚರ್ಚ, ಮಸೀದಿಗಳ ಮುಖಂಡರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News