×
Ad

ಜೂ. 21: ದಮಾಮ್ ನಿಂದ ಮಂಗಳೂರಿಗೆ ವಂದೇ ಭಾರತ್ ವಿಮಾನ

Update: 2020-06-10 10:05 IST

ಮಂಗಳೂರು, ಜೂ. 10 : ದಮಾಮ್ ನಿಂದ ಮಂಗಳೂರಿಗೆ ವಂದೇ ಭಾರತ್ ಯೋಜನೆಯ ಮೊದಲ ವಿಮಾನವು ಜೂನ್ 21ರಂದು ಪ್ರಯಾಣಿಸಲಿದೆ. 

ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಸೌದಿಯಲ್ಲಿ ಸಾವಿರಾರು ಮಂದಿ ಕನ್ನಡಿಗರು ಅತಂತ್ರರಾಗಿ ಸಿಲುಕಿದ್ದರು. ಕನಿಷ್ಟ 4 ಸಾವಿರ ಮಂದಿ ತುರ್ತು ಕಾರಣಗಳಿಗಾಗಿ ತಾಯ್ನಾಡಿಗೆ ಮರಳುವವರಿದ್ದರು. ಆದರೆ ಈ ವೇಳೆ ಅಂತರ್ ರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಬರುವುದಕ್ಕೆ ನಿರ್ಬಂಧವಿತ್ತು. ಆದ್ದರಿಂದ ಸೌದಿಯಲ್ಲಿರುವ ಕನ್ನಡಿಗರು ಹಾಗು ಹಲವು ಸಂಘಟಕರು ವಿಶೇಷವಾಗಿ 'ಸೌದಿ ಕನ್ನಡಿಗಾಸ್ ಹ್ಯುಮಾನಿಟಿ ಫೋರಮ್' ಇದರ ನೇತೃತ್ವದಲ್ಲಿ ಅತಂತ್ರ ಸೌದಿ ಕನ್ನಡಿಗರನ್ನು ತಾಯ್ನಾಡಿಗೆ ವಾಪಾಸಾಗಲು ವಿಶೇಷ ವಿಮಾನ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಹಾಗು ರಾಜ್ಯ ಸರಕಾರಗಳಿಗೆ ನಿರಂತರ ಮನವಿ ಮಾಡುತ್ತಲೇ ಬಂದಿದ್ದರು.

ಸೌದಿಯಲ್ಲಿರುವ ಪ್ರಮುಖ ಅನಿವಾಸಿ ಭಾರತೀಯ ಉದ್ಯಮಿಗಳಾದ ಝಕರಿಯಾ ಬಜ್ಪೆ ಹಾಗು ಶೇಖ್ ಕರ್ನಿರೆ ಇವರು ಈ ಅಭಿಯಾನದ ನೇತೃತ್ವ ವಹಿಸಿದ್ದರು. ಇವರ ಜೊತೆ ಇತರ ಉದ್ಯಮಿಗಳು, ಸಾಮಾಜಿಕ ಸಂಘಟನೆಗಳ ಮುಖಂಡರು ಈ ಪ್ರಯತ್ನದಲ್ಲಿ ಕೈ ಜೋಡಿಸಿದ್ದರು. ಕೊನೆಗೂ ಇದೀಗ ಬಹಳ ತಡವಾಗಿ ಒಂದೇ ಭಾರತ್ ಯೋಜನೆಯಲ್ಲಿ ದಮಾಮ್ ನಿಂದ ಮಂಗಳೂರಿಗೆ ಮೊದಲ ವಿಮಾನ ನಿಗದಿಯಾಗಿದೆ. ಈ ಹಿಂದೆ ಬಂದಿರುವ ವಿಮಾನಗಳು ಖಾಸಗಿ ಕಂಪೆನಿಗಳು ತಮ್ಮ ಖರ್ಚಿನಲ್ಲೇ ಕಳುಹಿಸಿದ ಬಾಡಿಗೆ ವಿಮಾನಗಳಾಗಿವೆ. 

ಕೇಂದ್ರ ಹಾಗು ರಾಜ್ಯ ಸರಕಾರದ ಹಲವು ಸಚಿವರುಗಳ ಜೊತೆ ವೀಡಿಯೊ ಸಂವಾದ ನಡೆಸಿ ಸೌದಿಯಿಂದ ತಕ್ಷಣ ವಿಮಾನ ವ್ಯವಸ್ಥೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರು. ಆದರೆ ವಂದೇ ಭಾರತ್ ಯೋಜನೆಯಲ್ಲಿ ವಿದೇಶದಿಂದ ಅತಂತ್ರ ಭಾರತೀಯರನ್ನು ಕರೆತರಲು ವಿಶೇಷ ವಿಮಾನ ಸೇವೆ ಪ್ರಾರಂಭವಾದಾಗ ಸೌದಿಯಿಂದ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಮಂಗಳೂರಿಗೆ ವಿಮಾನಗಳು ನಿಗದಿಯಾಗಿರಲಿಲ್ಲ. ಈ ಬಗ್ಗೆ ವ್ಯಾಪಕ ಅಸಮಾಧಾನ ಹಾಗು ಆಕ್ರೋಶ ವ್ಯಕ್ತವಾಗಿತ್ತು.

ಈಗ ಜೂನ್ 21ರಂದು ವಂದೇ ಭಾರತ್ ಯೋಜನೆಯಲ್ಲಿ ಮೊದಲ ವಿಮಾನ ದಮಾಮ್ ನಿಂದ ಮಂಗಳೂರಿಗೆ ಪ್ರಯಾಣಿಸಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News