ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಸ್ ಜೊತೆ ಪಿಣರಾಯಿ ಪುತ್ರಿಯ ವಿವಾಹ ನಿಶ್ಚಯ

Update: 2020-06-10 04:50 GMT

ತಿರುವನಂತಪುರ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್- ಕಮಲಾ ವಿಜಯನ್ ದಂಪತಿಯ ಹಿರಿಯ ಪುತ್ರಿ ವೀಣಾ ತೈಕ್ಕಂಡಿಯಿಲ್ ಅವರ ವಿವಾಹ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ರಾಷ್ಟ್ರೀಯ ಅಧ್ಯಕ್ಷ ಪಿ.ಎ. ಮುಹಮ್ಮದ್ ರಿಯಾಸ್ ಅವರೊಂದಿಗೆ ನಡೆಯಲಿದೆ.

ಐಟಿ ಉದ್ಯಮಿಯಾಗಿರುವ ವೀಣಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ವಿವಾಹ ಜೂನ್ 15ರಂದು ತಿರುವನಂತಪುರದಲ್ಲಿ ಸರಳವಾಗಿ ನಡೆಯಲಿದೆ. ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರಷ್ಟೇ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಶಾಲೆ- ಕಾಲೇಜು ದಿನಗಳಲ್ಲೇ ರಾಜಕೀಯ ಪ್ರವೇಶಿಸಿದ್ದ ಮುಹಮ್ಮದ್ ರಿಯಾಸ್, ಈ ಮೊದಲು ಡಿವೈಎಫ್‌ಐ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿದ್ದರು. 2017ರಲ್ಲಿ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಟೆಲಿವಿಷನ್ ಚಾನಲ್‌ಗಳಲ್ಲಿ ಸುದ್ದಿ ಆಧರಿತ ಚರ್ಚೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮೂಲಕ ರಿಯಾಸ್ ಕೇರಳದಲ್ಲಿ ಮನೆ ಮಾತಾಗಿದ್ದಾರೆ. ಕಸಾಯಿಖಾನೆಗಳಿಗಾಗಿ ಪ್ರಾಣಿ ಮಾರುಕಟ್ಟೆಯಲ್ಲಿ ಖರೀದಿಸುವುದನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಬೀಫ್ ಅಡುಗೆ ಮಾಡುವ ಮೂಲಕ ವಿಶಿಷ್ಟ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು.

2009ರ ಲೋಕಸಭಾ ಚುನಾವಣೆಯಲ್ಲಿ ಕೋಝಿಕ್ಕೋಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಿಯಾಸ್, ಯುಡಿಎಫ್‌ನ ಎಂ.ಕೆ.ರಾಘವನ್ ವಿರುದ್ಧ 800 ಮತಗಳಿಂದ ಸೋತಿದ್ದರು.

ಒರ್ಯಾಕಲ್‌ನಲ್ಲಿ ಉದ್ಯೋಗದಲ್ಲಿದ್ದ ವೀಣಾ, ಬಳಿಕ ಆರ್‌ಪಿ ಟೆಕ್ ‌ಸಾಫ್ಟ್‌ನಲ್ಲಿ ಸಿಇಓ ಆಗಿದ್ದರು. ಆರು ವರ್ಷ ಹಿಂದೆ ಎಕ್ಸಲಾಜಿಕ್ ಎಂಬ ಸ್ವಂತ ಕಂಪನಿ ಹುಟ್ಟುಹಾಕಿದ್ದರು. ಇದು ವೀಣಾ ಹಾಗೂ ರಿಯಾಸ್ ಇಬ್ಬರಿಗೂ ಎರಡನೇ ವಿವಾಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News