ನೇತ್ರಾವತಿ ಸೇತುವೆಯಲ್ಲಿ ಬೈಕ್ ಪತ್ತೆ ಪ್ರಕರಣಕ್ಕೆ ತಿರುವು: ಯುವಕ ಶಿವಮೊಗ್ಗದಲ್ಲಿ ಪತ್ತೆ
Update: 2020-06-10 12:50 IST
ಉಳ್ಳಾಲ : ಇಲ್ಲಿನ ನೇತ್ರಾವತಿ ಸೇತುವೆಯಲ್ಲಿ ಬೈಕ್ ಪತ್ತೆಯಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದ್ದ ಪ್ರಕರಣ ಈಗ ತಿರುವು ಪಡೆದಿದೆ. ನಾಪತ್ತೆಯಾಗಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕುರ್ನಾಡು ನಿವಾಸಿ ಪ್ರವೀಣ್ ಸಫಲ್ಯ ಎಂಬಾತನ ಬೈಕ್ ನೇತ್ರಾವತಿ ನದಿ ತಟದಲ್ಲಿ ಪತ್ತೆಯಾಗಿತ್ತು. ಮಂಗಳವಾರ ರಾತ್ರಿ ಕಚೇರಿಯಿಂದ ಹೊರಟಿದ್ದ ಈತ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹೀಗಾಗಿ ಈತ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಇಂದು ಬೆಳಿಗ್ಗೆಯಿಂದಲೇ ಸೇತುವೆ ಸುತ್ತ ಜನರು ಸೇರಿದ್ದು, ಹುಡುಕಾಟ ನಡೆಸಿದ್ದರು. ಆದರೆ ಇದೀಗ ತಾನು ಶಿವಮೊಗ್ಗದ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಾನೆ ಎಂಬ ಮಾಹಿತಿ ಬಂದಿದೆ.