ಕೋವಿಡ್-19: ಕ್ವಾರಂಟೈನ್ ನಿರ್ಧಾರದ ಅಧಿಕಾರ ಜಿಲ್ಲಾಧಿಕಾರಿಗೆ
ಉಡುಪಿ, ಜೂ.10: ಹೊರರಾಜ್ಯಗಳಿಂದ ಬರುವವರಿಗೆ ಹಾಗೂ ಸರಕಾರದ ನಿಯಮಗಳು ಉಲ್ಲಂಘಿಸುವವರಿಗೆ ನೀಡುವ ಕ್ವಾರಂಟೈನ್‌ನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಿ ಸರಕಾರ ಆದೇಶ ಹೊರಡಿಸಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ವ್ಯಕ್ತಿಯೊಬ್ಬನನ್ನು ಹೋಮ್ ಕ್ವಾರಂಟೈನ್‌ನಿಂದ ಸಾಂಸ್ಥಿಕ ಕ್ವಾರಂಟೈನ್‌ಗೆ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ನಿಂದ ಹೋಮ್ ಕ್ವಾರಂಟೈನ್‌ಗೆ ಬದಲಿಸುವ ಅಧಿಕಾರವೂ ಇನ್ನು ಜಿಲ್ಲಾಧಿಕಾರಿಗಿರುತ್ತದೆ ಎಂದವರು ತಿಳಿಸಿದರು.
ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವವರನ್ನು ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಿ ಆ ಮನೆಯನ್ನು ಸೀಲ್ ಡೌನ್ ಮಾಡುವ ಕುರಿತಂತೆ ಈಗಾಗಲೇ ಸರಕಾರದ ಆದೇಶವಾಗಿದ್ದು, ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮಹಾರಾಷ್ಟ್ರದಿಂದ ಬರುವವರನ್ನು 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಿ ಆ ಮನೆಯನ್ನು ಸೀಲ್‌ಡೌನ್ ಮಾಡಬೇಕಾಗಿದ್ದು, ಮನೆಯ ಸುತ್ತ ಟೇಪ್ ಹಾಕಬೇಕು ಹಾಗೂ ಮನೆ ಬಾಗಿಲಿಗೆ ಕ್ವಾರಂಟೈನ್ ಸ್ಟಿಕ್ಕರ್ ಅಳವಡಿಸಬೇಕು. ಅಕ್ಕಪಕ್ಕದ ಒಂದೆರಡು ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡುವುದಲ್ಲದೇ ಕ್ವಾರಂಟೈನ್‌ನಲ್ಲಿರುವವರು ನಿಯಮ ಉಲ್ಲಂಘಿಸಿ ಹೊರಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಅವರಿಗೆ ತಿಳಿಸಬೇಕಾಗಿದೆ ಎಂದರು.
ಸಂಬಂಧಪಟ್ಟ ಗ್ರಾಪಂಗೆ ಆ ಗ್ರಾಮದ ಕ್ವಾರಂಟೈನ್‌ನ ಸಂಪೂರ್ಣ ಜವಾಬ್ದಾರಿ ಇರುತ್ತದೆ. ಗ್ರಾಪಂನ ಕಂದಾಯ ನಿರೀಕ್ಷಕರು, ಬಿಲ್ ಕಲೆಕ್ಟರ್ ಮತ್ತು ಪಿಡಿಓಗಳ ತಂಡ ಈ ಮನೆಯನ್ನು ಪ್ರತಿದಿನ ಪರಿಶೀಲನೆ ನಡೆಸಬೇಕು. ಹಾಗೂ ಕ್ವಾರಂಟೈನ್ ವಾಚ್ ಆ್ಯಪ್ ಮೂಲಕ ಪ್ರತಿದಿನದ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದರ ಮೇಲುಸ್ತುವಾರಿಗೆ ಫ್ಲೈಯಿಂಗ್ ಸ್ಕ್ವಾಡ್‌ಗಳಿದ್ದು, ಅದು ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಮೊದಲು ಎಚ್ಚರಿಕೆ ನೀಡಿ, ಮತ್ತೆ ಪುನರಾವರ್ತಿಸಿದರೆ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ವರ್ಗಾ ಯಿಸಬೇಕು ಅಲ್ಲದೇ ಅವರ ವಿರುದ್ಧ ಎಪಿಡಮಿಕ್ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದರು.
ಇನ್ನು ಮುಂದೆ ಜಿಲ್ಲೆಯಲ್ಲಿರುವ ಹೆಚ್ಚಿನ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನು ಮುಚ್ಚಲಾಗುವುದು. ಪ್ರತಿ ತಾಲೂಕಿನಲ್ಲಿ ತಲಾ ಎರಡರಂತೆ ಕೇಂದ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗುವುದು. ಎಲ್ಲರ ಆರೋಗ್ಯ ತಪಾಸಣೆಯನ್ನೂ ಮಾಡಬೇಕು. ಗ್ರಾಮೀಣ ಪ್ರದೇಶ ಹಾಗೂ ನಗರದ ವಾರ್ಡ್ ಮಟ್ಟದಲ್ಲಿ ಕೊರೋನ ಕಾರ್ಯಪಡೆಗಳಿರುತ್ತವೆ ಎಂದರು.
ಈ ಕುರಿತಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಪ್ರತಿಯೊಂದು ಗ್ರಾಮಕ್ಕೂ ತಂಡವನ್ನು ರಚಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನಿಯಮ ಉಲ್ಲಂಘಿಸುವವರ ರುದ್ದ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸೀಲ್‌ಡೌನ್ ಮಾಡಿದ ಮನೆಯ ನಿವಾಸಿಗಳು 14 ದಿನಕ್ಕೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಮೊದಲೇ ಖರೀದಿಸಿರಬೇಕು. ಹಾಲು ಮತ್ತು ತರಕಾರಿ ಯನ್ನು ನಿರ್ದಿಷ್ಟ ಅಂಗಡಿಯಿಂದ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳ ತಂಡ ಪ್ರತೀ ದಿನ ಈ ಮನೆಗಳಿಗೆ ಭೇಟಿ ನೀಡಿ, ಗ್ರಾಪಂನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ ಕುರಿತು ತಪಾಸಣೆ ನಡೆಸಿ, ಅದೇ ದಿನ ಸಂಜೆಯೊಳಗೆ ವರದಿ ನೀಡಬೇಕು ಎಂದು ಹೇಳಿದರು.
ಕ್ವಾರಂಟೈನ್‌ಗೆ ಒಳಪಡುವವರ ಕೈಗೆ ಕಡ್ಡಾಯವಾಗಿ ಸೀಲ್ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ ಜಿ.ಜಗದೀಶ್, ಕ್ವಾರಂಟೈನ್ ಸೀಲ್ ಇರುವವರನ್ನು ಮಾಲ್, ಹೋಟೆಲ್, ದೇವಸ್ಥಾನದ ಒಳಗೆ ಪ್ರವೇಶ ನೀಡಿದಲ್ಲಿ ಸಂಬಂದಪಟ್ಟ ಸಂಸ್ಥೆಗಳ ಮುಖ್ಯಸ್ಥರ ವಿರುದ್ದ ಕ್ರಮ ಕೈಗೊಳ್ಳಲಾ. ಎಲ್ಲಾ ಸಂಸ್ಥೆಗಳು ತಮ್ಮ ಪ್ರವೇಶ ದ್ವಾರದಲ್ಲೇ ಇದನ್ನು ಪರೀಕ್ಷಿಸಿ ಅಂತಹವರು ಕಂಡುಬಂದಲ್ಲಿ ಕೂಡಲೇ 100ಕ್ಕೆ ಮಾಹಿತಿ ನೀಡುವಂತೆ ಸೂಚಿಸಿದರು.
ಜಿಲ್ಲೆಗೆ ಹೊರರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆ್ಯಪ್‌ನಲ್ಲಿ ನೊಂದಾಯಿಸಿಕೊಂಡು ಬರುವಂತೆ ತಿಳಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಸುರಕ್ಷತಾ ಅಂತರದ ಉಲ್ಲಂಘನೆ, ಮಾಸ್ಕ್ ಧರಿಸದೇ ಇರುವವರಿಗೆ ಕಟ್ಟುನಿಟ್ಟಾಗಿ ದಂಡ ವಿಧಿಸುವಂತೆ ಸೂಚಿಸಿದರು. ಬಸ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದು, ಈ ಕುರಿತಂತೆ ಸಂಬಂದಪಟ್ಟ ಬಸ್ ಮಾಲಕರು, ಡ್ರೈವರ್ ಮತ್ತು ಕಂಡಕ್ಟರ್ ವಿರುದ್ಧ ತಕ್ಷಣದಿಂದಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ವಿಷ್ಣುವರ್ಧನ್ ಹಾಗೂ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು