ಬಿವಿಟಿಯಿಂದ ಎಸೆಸೆಲ್ಸಿ ಮಕ್ಕಳಿಗೆ ಮಾಸ್ಕ್, ಮಾಹಿತಿ ಪೋಸ್ಟರ್ ಬಿಡುಗಡೆ
ಮಣಿಪಾಲ, ಜೂ.10: ಕೋವಿಡ್-19 ಹಿನ್ನೆಲೆಯಲ್ಲಿ ಜೂ.25ರಿಂದ ಪ್ರಾರಂಭಗೊಳ್ಳುವ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ಶಿಕ್ಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾಹಿತಿಗಳಿರುವ ಪೋಸ್ಟರ್‌ಗಳನ್ನು ಮತ್ತು ಪರೀಕ್ಷೆ ಬರೆಯುವ ವಿದ್ಯಾರ್ಥಿ ಗಳಿಗಾಗಿ ಸಿದ್ಧ ಪಡಿಸಿದ ಬಟ್ಟೆಯ ಮಾಸ್ಕ್‌ಗಳನ್ನು ರಾಜ್ಯ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಂಗಳವಾರ ಇಲ್ಲಿ ಬಿಡುಗಡೆಗೊಳಿಸಿದರು.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಸಿದ್ಧಪಡಿಸಿದ ಪೋಸ್ಟರ್‌ಗಳು ಹಾಗೂ ಮಾಸ್ಕ್‌ಗಳನ್ನು ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಇವರು ಶಿಕ್ಷಣ ಸಚಿವ ಸುರೇಶ ಕುಮಾರ್ ಮೂಲಕ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್‌ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಡಿಡಿಪಿಐ ಶೇಷಶಯನ ಉಪಸ್ಥಿತರಿದ್ದರು.
ಭಾರತೀಯ ವಿಕಾಸ ಟ್ರಸ್ಟ್ ಪ್ರತಿ ಪರೀಕ್ಷಾ ಕೇಂದ್ರಕ್ಕೆ 2ರಂತೆ ಮಾಹಿತಿ ಪೋಸ್ಟರ್‌ಗಳು ಹಾಗೂ ವಿದ್ಯಾರ್ಥಿಗಳಿಗೆ ಸುಮಾರು 8000ದಷ್ಟು ಬಟ್ಟೆಯ ಮಾಸ್ಕ್‌ಗಳನ್ನು ಒದಗಿಸಿದೆ. ಈ ಸೇವಾ ಕಾರ್ಯದಲ್ಲಿ ಬೆಂಗಳೂರಿನ ಸೆಲ್ಕೋ ಫೌಂಡೇಶನ್, ಕೆನರಾ ಬ್ಯಾಂಕ್ ಜ್ಯುಬಿಲಿ ಎಜ್ಯುಕೇಶನ್ ಫಂಡ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಮಣಿಪಾಲ ಇವರು ಸಹಕಾರತ್ತಿದ್ದಾರೆ ಎಂದು ಲಕ್ಷ್ಮಿಬಾಯಿ ತಿಳಿಸಿದ್ದಾರೆ.