×
Ad

​ಸೌದಿ, ಮುಂಬೈನಿಂದ ಬಂದಿದ್ದ ನಾಲ್ವರಲ್ಲಿ ಕೊರೋನ ಸೋಂಕು

Update: 2020-06-10 20:00 IST

ಮಂಗಳೂರು, ಜೂ.10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮತ್ತೆ ನಾಲ್ಕು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 222ಕ್ಕೇರಿದೆ. ಇಬ್ಬರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸೌದಿ ಅರೇಬಿಯಾದಿಂದ ಆಗಮಿಸಿದ್ದ 29 ಮತ್ತು 60 ವರ್ಷದ ಪುರುಷರಿಬ್ಬರು ಹಾಗೂ ಮಹಾರಾಷ್ಟ್ರದಿಂದ ಬಂದಿದ್ದ 30 ಮತ್ತು 40 ವರ್ಷದ ಪುರುಷರಲ್ಲಿ ಸೋಂಕು ದೃಢಪಟ್ಟಿದ್ದು, ಇವರನ್ನು ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತ 29 ವರ್ಷದ ವ್ಯಕ್ತಿ ಕಾರ್ಕಳದವರಾಗಿದ್ದು, ಜೂ.2ರಂದು ಸೌದಿ ಅರೇಬಿಯಾದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದರು. 60 ವರ್ಷದ ವ್ಯಕ್ತಿಯು ಶಿವಮೊಗ್ಗ ಜಿಲ್ಲೆಯ ಸಾಗರದವರಾಗಿದ್ದು, ಜೂ. 7ರಂದು ಸೌದಿ ಅರೇಬಿಯಾದಿಂದ ಆಗಮಿಸಿದ್ದರು. ಮಹಾರಾಷ್ಟ್ರದಿಂದ ಆಗಮಿಸಿದ್ದ 30 ಮತ್ತು 40 ವರ್ಷದ ವ್ಯಕ್ತಿಗಳು ಉಡುಪಿಯಲ್ಲಿ ಕ್ವಾರಂಟೈನ್ ಅವಧಿ ಪೂರೈಸಿ ಮೂಡುಬಿದಿರೆಗೆ ಬಂದ ನಂತರ ಸೋಂಕು ದೃಢಪಟ್ಟಿದೆ.

ಕೊರೋನ ಸೋಂಕಿನಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲ್ಪಟ್ಟು ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಗುಣಮುಖರಾಗಿದ್ದು, ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 222 ಪ್ರಕರಣಗಳ ಪೈಕಿ 117 ಮಂದಿ ಗುಣಮುಖರಾದಂತಾಗಿದೆ. ಪ್ರಸ್ತುತ 98 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಸ್ವೀಕಾರಗೊಂಡ ಒಟ್ಟು 59 ಮಂದಿಯ ವರದಿಯಲ್ಲಿ 55 ನೆಗೆಟಿವ್ ಆಗಿದ್ದರೆ, ನಾಲ್ಕು ಮಾತ್ರ ಪಾಸಿಟಿವ್ ಆಗಿವೆ. ಬುಧವಾರ ಮತ್ತೆ 65 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಮಾದರಿಗಳನ್ನು ಹೊರತುಪಡಿಸಿ ಇನ್ನೂ 13 ಮಂದಿಯ ವರದಿ ಇನ್ನಷ್ಟೇ ಬರಬೇಕಿದೆ.

ಜಿಲ್ಲೆಯಲ್ಲಿ ಇದುವರೆಗೆ 42,957 ಮಂದಿಯ ಸ್ಕ್ರೀನಿಂಗ್ ನಡೆದಿದೆ. 9916 ಮಂದಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 9594 ನೆಗೆಟಿವ್ ಮತ್ತು 222 ಪಾಸಿಟಿವ್ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News