ಜಮ್ಮು-ಕಾಶ್ಮೀರ: ಸಾಮಾಜಿಕ ಮಾಧ್ಯಮಗಳಲ್ಲಿ ಹೈಕೋರ್ಟ್ ತೀರ್ಪಿನ ಟೀಕೆಗಳ ವಿರುದ್ಧ ಪೊಲೀಸರಿಂದ ‘ಮುಕ್ತ ಎಫ್‌ಐಆರ್’ ದಾಖಲು

Update: 2020-06-10 14:31 GMT

ಶ್ರೀನಗರ,ಜೂ.10: ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ)ಯಡಿ ಕಾಶ್ಮೀರ ವಕೀಲರ ಸಂಘದ ಅಧ್ಯಕ್ಷ ಮಿಯಾಂ ಖಯ್ಯೂಮ್ ಅವರ ಬಂಧನವನ್ನು ಎತ್ತಿ ಹಿಡಿದಿರುವ ಮೇ 28ರ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ತೀರ್ಪನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿರುವುದರ ವಿರುದ್ಧ ಜಮ್ಮು-ಕಾಶ್ಮೀರ ಪೊಲೀಸರು ಮುಕ್ತ ಎಫ್‌ಐಆರ್ ದಾಖಲಿಸಿಕೊಂಡು,ತನಿಖೆಯನ್ನು ಆರಂಭಿಸಿದ್ದಾರೆ.

 ಮುಕ್ತ ಎಫ್‌ಐಆರ್‌ನಲ್ಲಿ ಆರೋಪಿಗಳನ್ನು ‘ಅಪರಿಚಿತ ವ್ಯಕ್ತಿಗಳು’ಎಂದು ಹೆಸರಿಸಲಾಗುತ್ತದೆ ಮತ್ತು ಇದು ನಂತರ ಹೆಸರುಗಳನ್ನು ಸೇರಿಸಲು ಪೊಲೀಸರಿಗೆ ಅವಕಾಶ ಕಲ್ಪಿಸುತ್ತದೆ. ನ್ಯಾಯಾಲಯಕ್ಕೆ ಕೆಟ್ಟ ಹೆಸರು ತರುವುದು ಮಾತ್ರವಲ್ಲ,ಸಾರ್ವಜನಿಕರಲ್ಲಿ ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ಮೂಲಕ ನ್ಯಾಯಾಂಗದಲ್ಲಿ ಅವರ ವಿಶ್ವಾಸಕ್ಕೆ ಚ್ಯುತಿಯನ್ನುಂಟು ಮಾಡುವುದೂ ಈ ಟೀಕೆಗಳ ಉದ್ದೇಶವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಐಪಿಸಿಯ ವಿವಿಧ ಕಲಮ್‌ಗಳಡಿ ಈ ಎಫ್‌ಐಆರ್ ಅನ್ನು ಶ್ರೀನಗರದ ಶಹೀದ್‌ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿಯ ವಿವರಗಳನ್ನು ಹಂಚಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಯಾವುದೇ ನ್ಯಾಯಾಧೀಶರು ಅಥವಾ ನ್ಯಾಯಾಲಯದ ಅಧಿಕಾರಿಗಳು ದೂರು ಸಲ್ಲಿಸಿಲ್ಲ,ಪೊಲೀಸರೇ ಸ್ವತಃ ಈ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ತೀರ್ಪಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳಿಗಾಗಿ ಡಝನ್‌ಗೂ ಹೆಚ್ಚು ಜನರನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಈ ಪೈಕಿ ವಕೀಲ ಬಿಲಾಲ್ ಅಹ್ಮದ್ ಭಟ್ ಅವರೂ ಒಬ್ಬರು. ಅವರಿಗೆ ಕರೆ ಮಾಡಿದ್ದ ಪೊಲೀಸರು ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ತಾನು ಕಿಮೊಥೆರಪಿಯಡಿ ಇರುವುದಾಗಿ ಬಿಲಾಲ್ ತಿಳಿಸಿದ ಬಳಿಕ ಪೊಲೀಸರು ಅವರನ್ನು ಒತ್ತಾಯಿಸಿಲ್ಲ. ಆದರೆ ತೀರ್ಪು ಕುರಿತಂತೆ ತನ್ನ ಟೀಕೆಯನ್ನು ಸಮರ್ಥಿಸಿಕೊಂಡಿರುವ ಬಿಲಾಲ್,ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ ಮತ್ತು ಓರ್ವ ಪ್ರಜೆಯಾಗಿ ತೀರ್ಪನ್ನು ಟೀಕಿಸುವ ಹಕ್ಕು ತನಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತೀರ್ಪನ್ನು ಟೀಕಿಸಿದ್ದಕ್ಕಾಗಿ ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತಿಲ್ಲ ಎಂದು ಹೇಳಿದರು.

ಎಫ್‌ಐಆರ್ ಅನಗತ್ಯವಾಗಿತ್ತು ಎಂದು ಕಾಶ್ಮೀರದಲ್ಲಿಯ ನ್ಯಾಯವಾದಿಗಳು ಹೇಳಿದ್ದಾರೆ. ಯಾವುದು ನ್ಯಾಯಾಲಯದ ಘನತೆಯನ್ನು ಕಡೆಗಣಿಸುತ್ತದೆ ಮತ್ತು ಯಾವುದು ಕಡೆಗಣಿಸುವುದಿಲ್ಲ ಎನ್ನುವ ನಿರ್ಧಾರವನ್ನು ಪೊಲೀಸರು ನ್ಯಾಯಾಲಯಗಳಿಗೇ ಬಿಡಬೇಕು. ಹೆಚ್ಚೆಂದರೆ ಅದು ನ್ಯಾಯಾಂಗ ನಿಂದನೆ ಪ್ರಕರಣವಾಗಬಹುದು,ಆದರೆ ಎಫ್‌ಐಆರ್ ಸಂಪೂರ್ಣವಾಗಿ ಅಸಮರ್ಥನೀಯ ಮತ್ತು ಅನಗತ್ಯವಾಗಿದೆ ಎಂದು ವಕೀಲ ಹಬೀಲ್ ಇಕ್ಬಾಲ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರವು ಕಳೆದ ವರ್ಷದ ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಎರಡು ದಿನಗಳ ಬಳಿಕ ಖಯ್ಯೂಮ್ ಅವರನ್ನು ಪಿಎಸ್‌ಎ ಅಡಿ ಪೊಲೀಸರು ಬಂಧಿಸಿದ್ದರು. ಅವರು ಸದ್ಯ ದಿಲ್ಲಿಯ ತಿಹಾರ ಜೈಲಿನಲ್ಲಿದ್ದಾರೆ.

ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಜಮ್ಮು-ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News