ಉಡುಪಿ: ಸತತ ಎರಡನೇ ದಿನವೂ ‘ಶೂನ್ಯ’ ಕೊರೋನ ಸೋಂಕಿತರು; ಜಿಲ್ಲೆಯಲ್ಲಿರುವುದು 486 ಸಕ್ರಿಯ ಪ್ರಕರಣ
ಉಡುಪಿ, ಜೂ.10: ಸತತ ಎರಡನೇ ದಿನವೂ ಯಾವುದೇ ಪಾಸಿಟಿವ್ ಪ್ರಕರಣಗಳನ್ನು ಕಾಣದ ಉಡುಪಿ ಜಿಲ್ಲೆ, ನೋವೆಲ್ ಕೊರೋನ ವೈರಸ್ ಸೋಂಕಿನಿಂದ ಮುಕ್ತಿ ಪಡೆಯುತ್ತ ನಿಧಾನಗತಿಯ ಹೆಜ್ಜೆ ಇಡುತ್ತಿದೆ. ನಿನ್ನೆಯಂತೆ ಇಂದೂ ಸಹ ಜಿಲ್ಲೆಯ ಯಾರಲ್ಲೂ ಹೊಸದಾಗಿ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಕಳೆದ ಸೋಮವಾರದವರೆಗೆ ಕಂಡ ಒಟ್ಟು 946 ಪಾಸಿಟಿವ್ ಪ್ರಕರಣ ಗಳೊಂದಿಗೆ ಈಗಲೂ ರಾಜ್ಯದಲ್ಲಿ ಅಗ್ರಸ್ಥಾನವನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ, ಅಷ್ಟೇ ವೇಗವಾಗಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತಿದ್ದಾರೆ.
ಇಂದು ಸಂಜೆಗೆ ಒಟ್ಟು 780 ಸೋಂಕಿತರನ್ನು ಹೊಂದಿರುವ ಕಲಬುರಗಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಯಾದಗಿರಿ 669 ಹಾಗೂ ಬೆಂಗಳೂರು ನಗರ 564 ಕೇಸುಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿವೆ.
ಒಂದು ವಾರ ಸತತವಾಗಿ ಕಾಣಿಸಿಕೊಂಡ ಅತ್ಯಧಿಕ ಸಂಖ್ಯೆಯ ಪಾಸಿಟಿವ್ ಪ್ರಕರಣದಿಂದ ಆತಂಕಕ್ಕೊಳಗಾದ ಜಿಲ್ಲೆಯ ಜನತೆಗೆ ನೆಮ್ಮದಿಯ ನಿಟ್ಟುಸಿರು ಬಿಡುವ, ಖುಷಿಯನ್ನು ಅನುಭವಿಸುವ ಕ್ಷಣವೂ ಇದೀಗ ಬಂದಿದೆ. ಇಂದು ಸಂಜೆಯವರೆಗೆ ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 459 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಜಿಲ್ಲೆಯಲ್ಲೀಗ ಇರುವುದು 486 ಸಕ್ರಿಯ ಪ್ರಕರಣಗಳು ಮಾತ್ರ. ಮುಂಬೈಯಿಂದ ಬಂದ ಬೈಂದೂರಿನ 54 ವರ್ಷ ಪ್ರಾಯದ ಒಬ್ಬರು ಮಾತ್ರ ಜಿಲ್ಲೆಯಲ್ಲಿ ಇದುವರೆಗೆ ಕೊರೋನಕ್ಕೆ ಬಲಿಯಾಗಿದ್ದಾರೆ. ಮೇ 14ಕ್ಕೆ ಕೆಎಂಸಿಯಲ್ಲಿ ಹೃದಯಾಘಾತದಿಂದ ನಿಧನರಾದ ಅವರಲ್ಲಿ ಕೊರೋನ ಸೋಂಕು ಪತ್ತೆಯಾಗಿತ್ತು.
ಜಿಲ್ಲಾ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ನಿನ್ನೆ ಒಟ್ಟು 110 ಮಂದಿ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದರೆ, ಚಿಕಿತ್ಸೆಯ ಬಳಿಕ ನಡೆಸಿದ ಎರಡು ಸ್ಯಾಂಪಲ್ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದ ಇನ್ನೂ 75 ಮಂದಿಯನ್ನು ಇಂದು ಬಿಡುಗಡೆಗೊಳಿಸಲಾಗಿದೆ. ಹೀಗಾಗಿ ಎರಡು ದಿನಗಳಲ್ಲಿ ಒಟ್ಟು 185 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಂತಾಗಿದೆ.
34 ಸ್ಯಾಂಪಲ್ ನೆಗೆಟಿವ್: ಬುಧವಾರ 34 ಗಂಟಲು ದ್ರವ ಮಾದರಿಗಳ ವರದಿ ಬಂದಿದ್ದು, ಎಲ್ಲವೂ ಸೋಂಕಿಗೆ ನೆಗೆಟಿವ್ ಆಗಿವೆ. ಇಂದು ಕೋವಿಡ್-19 ರೋಗದ ಗುಣ ಲಕ್ಷಣವಿರುವ 123 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ ಇಬ್ಬರು ಕೋವಿಡ್ ಸಂಪರ್ಕಿತರಾದರೆ ಒಬ್ಬರು ಉಸಿರಾಟದ ತೊಂದರೆಯವರು, ಮೂವರು ಶೀತಜ್ವರದಿಂದ ಬಳಲುವವರು ಹಾಗೂ ಒಟ್ಟಾರೆಯಾಗಿ 117 ಮಂದಿ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.
ಈ ಮೂಲಕ ನಿನ್ನೆಯವರೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ ಎಲ್ಲಾ ಸ್ಯಾಂಪಲ್‌ಗಳ ವರದಿ ಬಂದಂತಾಗಿದೆ. ಜಿಲ್ಲೆಯಲ್ಲಿ ಇನ್ನು ಪರೀಕ್ಷೆಗೆ ಬಾಕಿ ಇರುವುದು ಇಂದು ಸಂಗ್ರಹಿಸಿ ಕಳುಹಿಸಿದ 122ರ ವರದಿ ಮಾತ್ರ ಎಂದು ಡಿಎಚ್‌ಓ ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ಮಾದರಿಗಳು 12,680. ಇಂದು ಸಂಜೆಯವರೆಗೆ ಒಟ್ಟು 12,558ರ ವರದಿ ಬಂದಿವೆ. ಇದರಲ್ಲಿ 11,612 ನೆಗೆಟಿವ್ ಆಗಿದ್ದರೆ, ಒಟ್ಟು 946 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನು ಇಂದು ಕಳುಹಿಸಿದ 122 ಸ್ಯಾಂಪಲ್‌ಗಳ ವರದಿಯ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯಲ್ಲೀಗ 486 ಸಕ್ರಿಯ ಪ್ರಕರಣಗಳಿವೆ ಎಂದವರು ಹೇಳಿದರು.
ಐಸೋಲೇಷನ್ ವಾರ್ಡಿಗೆ 7 ಮಂದಿ: ಬುಧವಾರ ರೋಗದ ಗುಣ ಲಕ್ಷಣದೊಂದಿಗೆ ಐವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸೇರಿ ಒಟ್ಟು 7 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಕೊರೋನ ಶಂಕಿತರು ಒಬ್ಬರು, ಉಸಿರಾಟದ ತೊಂದರೆ ಯವರು ಮೂವರು ಹಾಗೂ ಶೀತಜ್ವರದ ಮೂವರು ಸೇರಿದ್ದಾರೆ.
ಇಂದು ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ 19 ಮಂದಿ ಬಿಡುಗಡೆಗೊಂಡಿದ್ದು, 70 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 61 ಮಂದಿ ಮಂಗಳವಾರ ನೊಂದಣಿ ಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5293 ಮಂದಿ ಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4590 ಮಂದಿ (ಇಂದು 118) 28 ದಿನಗಳ ನಿಗಾವಣೆ ಹಾಗೂ 4845 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ. ಜಿಲ್ಲೆಯಲ್ಲಿ ಈಗಲೂ 376 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 218 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.
ಮುಂಬೈಯಿಂದ ಬಂದು ಒಂದು ವಾರ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಮನೆಗೆ ಕಳುಹಿಸಲ್ಪಟ್ಟ ಬೈಂದೂರಿನ 47ರ ಹರೆಯ ವ್ಯಕ್ತಿ, ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆಗಾಗಿ ಉಡುಪಿ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಈಗಲೂ ಚಿಕಿತ್ಸೆ ಪಡೆಯುತಿದ್ದು, ಅವರ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ಡಿಎಚ್‌ಓ ತಿಳಿಸಿದರು.