×
Ad

ಮಂಗಳೂರು: ಸೆಂಟ್ರಲ್ ಮಾರುಕಟ್ಟೆಯ ವಿದ್ಯುತ್, ನೀರು ಸಂಪರ್ಕ ಕಡಿತ

Update: 2020-06-10 20:31 IST

ಮಂಗಳೂರು, ಜೂ.10: ಮಂಗಳೂರು ಮನಪಾವು ಇದೀಗ ವಿವಾದದ ಕೇಂದ್ರವಾಗಿರುವ ನಗರದ ಸೆಂಟ್ರಲ್ ಮಾರುಕಟ್ಟೆಯ ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಕಡಿತಗೊಳಿಸಿ ಅಚ್ಚರಿ ಮೂಡಿಸಿದೆ.

ಕೊರೋನ-ಲಾಕ್‌ಡೌನ್ ಸಂದರ್ಭ ಸುರಕ್ಷಿತ ಅಂತರ ಕಾಪಾಡಲು ಅಸಾಧ್ಯ ಎಂಬ ಕಾರಣ ಮನಪಾ ಆಡಳಿತವು ಇಲ್ಲಿನ ವ್ಯಾಪಾರಿಗಳನ್ನು ತರಾತುರಿಯಲ್ಲಿ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಿತ್ತು. ಒಲ್ಲದ ಮನಸ್ಸಿನಿಂದ ಇಲ್ಲಿನ ಸಗಟು ವ್ಯಾಪಾರಿಗಳು ಬೈಕಂಪಾಡಿಗೆ ಸ್ಥಳಾಂತರಗೊಂಡರೂ ಕೂಡ ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಆರೋಪಿಸಿದ್ದರು. ಈ ಮಧ್ಯೆ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹಾಗೂ ಕೆಲವು ವ್ಯಾಪಾರಿಗಳು ಹೈಕೋರ್ಟ್ ಮೊರೆ ಹೊಕ್ಕು ನ್ಯಾಯಾಲಯದಿಂದ ಬೈಕಂಪಾಡಿಗೆ ಸ್ಥಳಾಂತರ ಮತ್ತು  ಸೆಂಟ್ರಲ್ ಮಾರುಕಟ್ಟೆಯನ್ನು ಕೆಡವದಂತೆ ಮಧ್ಯಂತರ ತಡೆಯಾಜ್ಞೆ ತಂದಿದ್ದರು. ಅಲ್ಲದೆ ಮಂಗಳವಾರ ಸೆಂಟ್ರಲ್ ಮಾರುಕಟ್ಟೆಯೊಳಗೆ ಪ್ರವೇಶಿಸಿ ವ್ಯಾಪಾರ ಮಾಡಲು ಮುಂದಾಗಿದ್ದರು. ಇದಕ್ಕೆ ಮನಪಾ ಆಡಳಿತವು ಪೊಲೀಸ್ ಬಲಪ್ರಯೋಗದಿಂದ ತಡೆಯೊಡ್ಡಿತ್ತು.

ಬುಧವಾರ ವ್ಯಾಪಾರಿಗಳು ಸೆಂಟ್ರಲ್ ಮಾರುಕಟ್ಟೆ ಮತ್ತು ಬೈಕಂಪಾಡಿ ಯಾರ್ಡ್‌ನಲ್ಲಿ ವ್ಯಾಪಾರ ಮಾಡದೆ ಮನಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾನೂನು ಸಲಹೆಗಾರ ಮನಮೋಹನ್ ಜೋಯ್ಸ್ ಮನಪಾ ಆಡಳಿತವು ರಾಜ್ಯ ಹೈಕೋರ್ಟಿನ ಆದೇಶವನ್ನು ಧಿಕ್ಕರಿಸಿದೆ ಮತ್ತು ಅಗೌರವ ತೋರಿದೆ. ಅಷ್ಟೇ ಅಲ್ಲ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿ ಅನ್ಯಾಯ ಎಸಗಿದೆ. ಸೆಂಟ್ರಲ್ ಮಾರುಕಟ್ಟೆಯು ಮಂಗಳೂರು ಎಪಿಎಂಸಿಯ ಉಪಯಾರ್ಡ್ ಆಗಿದೆ. ಮನಪಾಕ್ಕೆ ಸೆಂಟ್ರಲ್ ಮಾರುಕಟ್ಟೆಯ ಮೇಲೆ ಯಾವುದೇ ಹಕ್ಕಿಲ್ಲ. ಅದು ಅಧಿಕಾರ ದುರುಪಯೋಗ ಪಡಿಸುತ್ತಿದೆ. ಮನಪಾ ವಿರುದ್ಧ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News