×
Ad

ಆರೋಗ್ಯ ಯೋಜನೆ ಪಟ್ಟಿಯಲ್ಲಿರುವ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದರೆ ಸೂಕ್ತ ಕ್ರಮ: ಕೇಂದ್ರದ ಎಚ್ಚರಿಕೆ

Update: 2020-06-10 21:39 IST

ಹೊಸದಿಲ್ಲಿ, ಜೂ.9: ಕೇಂದ್ರ ಸರಕಾರದ ಆರೋಗ್ಯ ಯೋಜನೆ ಪಟ್ಟಿಯಲ್ಲಿರುವ ಮತ್ತು ಕೋವಿಡ್ ಸೋಂಕಿತರಿಗೆ ಮತ್ತು ಕೋವಿಡ್ ಸೋಂಕು ರಹಿತರಿಗೆ ಚಿಕಿತ್ಸೆ ನೀಡಲು ಗೊತ್ತುಪಡಿಸಿದ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕೇಂದ್ರ ಸರಕಾರದ ಆರೋಗ್ಯ ಯೋಜನೆ ಪಟ್ಟಿಯಲ್ಲಿರುವ ಖಾಸಗಿ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಆರೋಗ್ಯ ಯೋಜನೆಯ ಫಲಾನುಭವಿಗಳ ನಿಯೋಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಎಚ್ಚರಿಕೆ ನೀಡಿದೆ. ನಿಯೋಗದ ದೂರನ್ನು ಪರಿಶೀಲಿಸಿದ ಬಳಿಕ, ಆರೋಗ್ಯ ಯೋಜನೆಯ ಪಟ್ಟಿಯಲ್ಲಿರುವ ಮತ್ತು ಕೊರೋನ ಸೋಂಕಿತರ ಚಿಕಿತ್ಸೆಗೆಂದು ಗುರುತಿಸಲಾದ ಎಲ್ಲಾ ಆಸ್ಪತ್ರೆಗಳೂ, ಯೋಜನೆಯ ಪ್ರಕಾರ ಕೊರೋನ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ಒದಗಿಸಬೇಕು. ಇದೇ ರೀತಿ, ಕೊರೋನ ಸೋಂಕಿತರಲ್ಲದ ರೋಗಿಗಳ ಚಿಕಿತ್ಸೆಗೆ ಗುರುತಿಸಲಾದ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಬಾರದು ಮತ್ತು ಯೋಜನೆಯ ನಿಯಮದಂತೆಯೇ ಶುಲ್ಕವನ್ನು ವಿಧಿಸಬೇಕು.

 ಈ ಸೂಚನೆ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜೂನ್ 9ರಂದು ಜಾರಿಗೊಳಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಕೇಂದ್ರ ಸರಕಾರದ ಆರೋಗ್ಯ ಯೋಜನೆಯಡಿ ಈಗ ದೇಶದಲ್ಲಿ 36 ಲಕ್ಷ ಫಲಾನುಭವಿಗಳು ಹಾಗೂ 12 ಲಕ್ಷ ಕಾರ್ಡ್ ಹೊಂದಿದವರು ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News