ಸೋಮೇಶ್ವರ ಪುರಸಭೆ ವಾರ್ಡ್ ವಿಂಗಡಣೆ: ಕರಡು ಅಧಿಸೂಚನೆ ಪ್ರಕಟ
ಮಂಗಳೂರು, ಜೂ.10: ಸೋಮೇಶ್ವರ ಪುರಸಭೆಗೆ 23 ವಾರ್ಡ್‌ಗಳನ್ನು ಹಾಗೂ ವಾರ್ಡು ವ್ಯಾಪ್ತಿಯನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಕರಡು ಅಧಿಸೂಚನೆ ಬುಧವಾರ ಹೊರಡಿಸಿದ್ದಾರೆ. ಅಧಿಸೂಚನೆಯನ್ನು ಮಂಗಳೂರು ಎ.ಸಿ. ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಸೋಮೇಶ್ವರ ಪುರಸಭೆ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
ಹೊಸದಾಗಿ ರಚನೆಯಾಗಿರುವ ಸೋಮೇಶ್ವರ ಪುರಸಭೆಯ ಕ್ಷೇತ್ರ ವಿಂಗಡಣೆಯನ್ನು 2011ರ ಜನಗಣತಿ ಆಧಾರದಲ್ಲಿ ಸರಕಾರದ ಅಧಿಸೂಚನೆ 2014 ಮಾರ್ಗದರ್ಶನದನ್ವಯ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಗಳಿಂದ ಪಡೆದು ಅದನ್ನು ತಹಶೀಲ್ದಾರರು ಪರಿಶೀಲಿಸಿದ್ದಾರೆ. ಜೊತೆಗೆ, ಸಹಾಯಕ ಆಯುಕ್ತರು ಒಪ್ಪಿಸಿರುವ ಕ್ಷೇತ್ರ ವಿಂಗಡಣೆ ಪ್ರಸ್ತಾವನೆಯನ್ನು ಪರಿಶೀಲಿಸಿ, ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಕರಡು ಅಧಿಸೂಚನೆಯಂತೆ ಕ್ಷೇತ್ರ ವಿಂಗಡನೆಗೆ ಸಾರ್ವಜನಿಕರಿಂದ ಆಕ್ಷೇಪಣೆ/ಸಲಹೆ ಸೂಚನೆಗಳಿದ್ದಲ್ಲಿ 15 ದಿನಗಳೊಳಗಾಗಿ ಲಿಖಿತವಾಗಿ/ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದಾಗಿದೆ. ಈ ಅವಧಿಯಲ್ಲಿ ಸ್ವೀಕೃತವಾದ ಎಲ್ಲ ಆಕ್ಷೇಪಣೆಗಳನ್ನು ರಾಜ್ಯ ಪುರಸಭೆಗಳ ಕಾಯ್ದೆ ಮತ್ತು ಸರಕಾರಿ ಮಾರ್ಗಸೂಚಿಯನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.