ಶೀಘ್ರವೇ ವುಹಾನ್ ಕೌನ್ಸುಲೇಟ್ ಕಚೇರಿ ಪುನರಾರಂಭ: ಅಮೆರಿಕ

Update: 2020-06-10 18:07 GMT

ಬೀಜಿಂಗ್, ಜೂ. 10: ಚೀನಾದ ವುಹಾನ್ ನಗರದಲ್ಲಿರುವ ಕೌನ್ಸುಲೇಟ್ ಕಚೇರಿಯಲ್ಲಿ ಕೆಲಸವನ್ನು ಶೀಘ್ರವೇ ಆರಂಭಿಸುವುದಾಗಿ ಇಲ್ಲಿನ ಅಮೆರಿಕ ರಾಯಭಾರ ಕಚೇರಿ ಬುಧವಾರ ತಿಳಿಸಿದೆ.

ಪ್ರಸಕ್ತ ಜಗತ್ತನ್ನೇ ಅಲ್ಲೋಲಕಲ್ಲೋಲಗೊಳಿಸಿರುವ ನೂತನ-ಕೊರೋನ ವೈರಸ್‌ನ ಉಗಮವು ವುಹಾನ್ ನಗರದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಆಗಿತ್ತು.

ವುಹಾನ್‌ನಲ್ಲಿರುವ ಕೌನ್ಸುಲೇಟ್ ಕಚೇರಿಯಲ್ಲಿ ಚಟುವಟಿಕೆಗಳನ್ನು ಶೀಘ್ರದಲ್ಲೇ ಆರಂಭಿಸುವ ಇರಾದೆಯನ್ನು ಅಮೆರಿಕದ ಚೀನಾ ರಾಯಭಾರಿ ಟೆರಿ ಬ್ರ್ಯಾನ್‌ಸ್ಟಡ್ ಹೊಂದಿದ್ದಾರೆ ಎಂದು ರಾಯಭಾರ ಕಚೇರಿಯಲ್ಲಿ ಸಾರ್ವಜನಿಕ ವ್ಯವಹಾರಗಳ ಮಿನಿಸ್ಟರ್ ಕೌನ್ಸಿಲರ್ ಫ್ರಾಂಕ್ ವೈಟಾಕರ್ ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಆದರೆ, ಅವರು ನಿರ್ದಿಷ್ಟ ದಿನಾಂಕವನ್ನು ನೀಡಿಲ್ಲ.

ಕೊರೋನ ವೈರಸ್‌ನ ಹರಡುವಿಕೆಯನ್ನು ತಡೆಯುವುದಕ್ಕಾಗಿ ಚೀನಾ ಸರಕಾರ ಜನವರಿ ಉತ್ತರಾರ್ಧದಲ್ಲಿ ವುಹಾನ್ ನಗರಕ್ಕೆ ಬೀಗ ಹಾಕಿದಾಗ, ಅಲ್ಲಿಂದ ತನ್ನ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರನ್ನು ಅಮೆರಿಕದ ವಿದೇಶಾಂಗ ಇಲಾಖೆಯು ವಾಪಸ್ ಕರೆಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News