ಪೊಲೀಸ್ ಸುಧಾರಣೆಗಳನ್ನು ಅಂಗೀಕರಿಸಿದ ವಾಶಿಂಗ್ಟನ್ ಡಿಸಿ ಜಿಲ್ಲೆ

Update: 2020-06-10 18:17 GMT

ವಾಶಿಂಗ್ಟನ್, ಜೂ. 10: ಪೊಲೀಸರ ಬಂಧನದ ವೇಳೆ ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ ಬಳಿಕ, ಅಮೆರಿಕದಾದ್ಯಂತ ನಡೆದಿರುವ ಪ್ರತಿಭಟನೆಗಳಿಗೆ ಮಣಿದಿರುವ ವಾಶಿಂಗ್ಟನ್ ಡಿಸಿಯ ಡಿಸ್ಟ್ರಿಕ್ಟ್ ಕೌನ್ಸಿಲ್ ಮಂಗಳವಾರ ಹಲವಾರು ಪೊಲೀಸ್ ಸುಧಾರಣೆಗಳಿಗೆ ಅಂಗೀಕಾರ ನೀಡಿದೆ.

ಪೊಲೀಸರ ಅಮಾನುಷತೆ ಮತ್ತು ಜನಾಂಗೀಯ ತಿರಸ್ಕಾರಗಳ ವಿರುದ್ಧ ಅಮೆರಿಕ ಹಾಗೂ ಜಗತ್ತಿನ ಇತರ ಭಾಗಗಳಲ್ಲಿ ಈಗಲೂ ಪ್ರತಿಭಟನೆಗಳು ನಡೆಯುತ್ತಿವೆ.

ತುರ್ತು ಶಾಸನವನ್ನು ಕೌನ್ಸಿಲ್ ಸರ್ವಾನುಮತದಿಂದ ಅಂಗೀಕರಿಸಿದೆ. ನೂತನ ಶಾಸನವು ಕುತ್ತಿಗೆಯ ಚಲನವಲನವನ್ನು ನಿರ್ಬಂಧಿಸುವುದನ್ನು ನಿಷೇಧಿಸುತ್ತದೆ ಹಾಗೂ ಪೊಲೀಸರ ಕೈಯಲ್ಲಿ ಯಾರಾದರೂ ಮೃತಪಟ್ಟರೆ ಅಥವಾ ಪೊಲೀಸರು ಅಗಾಧ ಪ್ರಮಾಣದಲ್ಲಿ ಬಲಪ್ರಯೋಗ ಮಾಡಿದರೆ ಅಂಥ ಪೊಲೀಸರ ಹೆಸರುಗಳು ಮತ್ತು ಅವರ ಬಾಡಿ ಕ್ಯಾಮರಗಳಲ್ಲಿರುವ ಚಿತ್ರಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ.

ದುರ್ವರ್ತನೆಗಳಲ್ಲಿ ತೊಡಗಿರುವ ಇತಿಹಾಸವುಳ್ಳ ಜನರನ್ನು ಮೆಟ್ರೊಪಾಲಿಟನ್ ಪೊಲೀಸ್ ಇಲಾಖೆಗೆ ನೇಮಕ ಮಾಡುವುದನ್ನು ನೂತನ ಶಾಸನವು ನಿಷೇಧಿಸುತ್ತದೆ. ಮಾರಕವಲ್ಲದ ಬಲಪ್ರಯೋಗದ ಮೇಲೆ ಹಾಗೂ ಸೇನಾ ಆಯುಧಗಳನ್ನು ಪೊಲೀಸ್ ಇಲಾಖೆಯು ಪಡೆಯುವುದರ ಮೇಲೆಯೂ ಅದು ಮಿತಿಯನ್ನು ಹೇರುತ್ತದೆ.

ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆನ್ನುವುದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಒಂದೇ ಒಂದು ಪ್ರಶ್ನೆಯೆಂದರೆ, ನಾವು ಮತ್ತು ನಮ್ಮ ಪೊಲೀಸ್ ನಾಯಕತ್ವ ಈ ಸವಾಲಿನ ಮಟ್ಟಕ್ಕೆ ಏರಲು ಸಿದ್ಧವಿದೆಯೇ ಎನ್ನುವುದು ಎಂದು ಡಿಸ್ಟ್ರಿಕ್ಟ್ ಕೌನ್ಸಿಲ್ ಸದಸ್ಯ ರಾಬರ್ಟ್ ವೈಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News