×
Ad

ದಮಾಮ್‌ನಿಂದ ಮಂಗಳೂರು ತಲುಪಿದ ಸಾಕೋ ಕಂಪೆನಿಯ ಬಾಡಿಗೆ ವಿಮಾನ

Update: 2020-06-11 01:30 IST

ದಮಾಮ್/ಮಂಗಳೂರು, ಜೂ.11: ಕೊರೋನ ಲಾಕ್‌ಡೌನ್ ನಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದ ಕನ್ನಡಿಗರ ಪೈಕಿ 175 ಮಂದಿಯಿರುವ ಸಾಕೋ ಕಾಂಟ್ರಾಕ್ಟಿಂಗ್ ಕಂಪೆನಿಯ ಬಾಡಿಗೆ ವಿಮಾನ ಬುಧವಾರ ತಡ ರಾತ್ರಿ 1:15ಕ್ಕೆ ಮಂಗಳೂರಿಗೆ ತಲುಪಿದೆ.

ದಮಾಮ್ ನಲ್ಲಿರುವ ಸಾಕೋ ಕಂಪೆನಿಯ ನಿರ್ದೇಶಕರಾದ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಅವರು ಈ ವಿಮಾನದ ವೆಚ್ಚ ಭರಿಸಿ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು.

ದಮಾಮ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 6.20ಕ್ಕೆ (ಸೌದಿ ಸಮಯ) ಹೊರಟ ವಿಮಾನವು ಮಂಗಳೂರಿಗೆ ರಾತ್ರಿ ಸುಮಾರು 1:15ಕ್ಕೆ ಮಂಗಳೂರು ತಲುಪಿತು. ಎಂಟು ಚಿಕ್ಕ ಮಕ್ಕಳು ಸಹಿತ 175 ಅತಂತ್ರ ಕನ್ನಡಿಗರು ಇದರಲ್ಲಿ ತಾಯ್ನಾಡಿಗೆ ತಲುಪಿದ್ದಾರೆ.

ಈ ಬಗ್ಗೆ ವಾರ್ತಾಭಾರತಿಗೆ ಮಾಹಿತಿ ನೀಡಿದ ಅಲ್ತಾಫ್ ಉಳ್ಳಾಲ್  ಈ ವಿಶೇಷ ಬಾಡಿಗೆ ವಿಮಾನದಲ್ಲಿ ತಮ್ಮ ಸಂಸ್ಥೆಯ ಯಾವುದೇ ಸಿಬ್ಬಂದಿ ಅಥವಾ ಸಂಬಂಧಿಕರು ಪ್ರಯಾಣ ಬೆಳೆಸುತ್ತಿಲ್ಲ; ಬದಲಾಗಿ ಸಂಕಷ್ಟದಲ್ಲಿನ ಕನ್ನಡಿಗರಿಗಾಗಿಯೇ ಈ ಬಾಡಿಗೆ ವಿಮಾನವನ್ನು ಕಳುಹಿಸಲಾಗು ತ್ತಿದೆ. ಎಲ್ಲ ಪ್ರಯಾಣಿಕರ ಪ್ರಯಾಣ ವೆಚ್ಚವನ್ನು ಕಂಪೆನಿಯೇ ಭರಿಸುತ್ತಿದೆ. ಅಲ್ಲದೆ, ಮಂಗಳೂರಿನಲ್ಲಿ ಕ್ವಾರಂಟೈನ್‌ಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಜೊತೆಗೆ ಕೊರೋನ ಪರೀಕ್ಷಾ ವೆಚ್ಚವನ್ನೂ ಸಂಸ್ಥೆಯೇ ಪಾವತಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಕೋ ಕಂಪೆನಿಯು ಬಾಡಿಗೆ ವಿಮಾನದಲ್ಲಿ ಪ್ರಯಾಣಿಸುವವರ ಪಟ್ಟಿ ಅಂತಿಮಗೊಳಿಸಲು ಈ ಮೊದಲು ಹೆಲ್ಪ್ ಡೆಸ್ಕ್ ಪ್ರಾರಂಭಿಸಿತ್ತು. ಇದಕ್ಕೆ ಬಂದಿದ್ದ ಕರೆಗಳ ಆಧಾರದಲ್ಲಿ ಗರ್ಭಿಣಿಯರು, ವಿಸಿಟ್ ವೀಸಾದಲ್ಲಿ ಬಂದು ಅತಂತ್ರರಾಗಿರುವ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರು, ಕೆಲಸ ಕಳೆದುಕೊಂಡು ಕಂಗಾಲಾಗಿರುವವರು, ಊರಲ್ಲಿ ನಿಕಟ ಸಂಬಂಧಿಗಳು ಮೃತಪಟ್ಟವರು ಹಾಗೂ ತೀರಾ ಇತರ ತುರ್ತು ಅಗತ್ಯ ಇರುವವರರನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಿ ಕಳುಹಿಸಲಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಒಟ್ಟು 61 ಹಿರಿಯ ನಾಗರೀಕರು, 55 ಗರ್ಭಿಣಿಯರು, 20 ಮಂದಿ  ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರು, ಪೋಷಕರು ನಿಧನರಾದ ಕುಟುಂಬದ ನಾಲ್ವರು, 35 ಮಕ್ಕಳು ಹಾಗು ಸಣ್ಣ ಮಕ್ಕಳು ಪ್ರಯಾಣಿಸಿದ್ದಾರೆ.

ದಮಾಮ್ ನಲ್ಲಿ ಭಾವನಾತ್ಮಕ ಬೀಳ್ಕೊಡುಗೆ

ಸಾಕೋ ಕಂಪೆನಿಯ ಸುಮಾರು 20 ಮಂದಿಯ ಎರಡು ತಂಡಗಳು ಕಳೆದೊಂದು ವಾರದಿಂದ ಹಗಲು ರಾತ್ರಿ ಈ ವಿಮಾನ ಕಳಿಸುವ ಸಂಬಂಧಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಶ್ರಮಿಸಿವೆ. ಇಲ್ಲಿ ಅತಂತ್ರರಾಗಿ ಚಿಂತೆಗೀಡಾಗಿದ್ದ ನಮ್ಮ ನಾಡಿನ 175 ಜನರನ್ನು ತಾಯ್ನಾಡಿಗೆ ತಲುಪಿಸುವ ಸೌಭಾಗ್ಯ ನಮಗೆ ಸಿಕ್ಕಿದ್ದು ಅತ್ಯಂತ ಸಂತಸದ ಸಂಗತಿ. ಇಂದು ಇಡೀ ದಮಾಮ್ ವಿಮಾನ ನಿಲ್ದಾಣ ಹಿಂದೆಂದೂ ಕಂಡಿರದಂತಹ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಪ್ರತಿಯೊಬ್ಬ ಪ್ರಯಾಣಿಕನ ಮುಖದಲ್ಲಿ ಊರಿಗೆ ಹೋಗುವ ಸಂತಸ, ಸಂತೃಪ್ತಿ ಕಾಣುವಾಗ ನಮಗೆ ಆದ ಸಂತೋಷಕ್ಕೆ ಪಾರವಿಲ್ಲ. ನಾವು ಹಿಂದೆಂದೂ ಇಂತಹದೊಂದು ವಿಮಾನವನ್ನು ಬೀಳ್ಕೊಟ್ಟಿಲ್ಲ ಎಂದು ದಮಾಮ್ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗ ಹೇಳಿದರು.

30 ಪ್ರಯಾಣಿಕರಿಗೆ ವೀಲ್ ಚೇರ್ ಅಗತ್ಯವಿತ್ತು. ನಮ್ಮ  ತಂಡದ ಸದಸ್ಯರು ಪ್ರತಿಯೊಬ್ಬ ಪ್ರಯಾಣಿಕನಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಅವರನ್ನು ಕಳಿಸಿಕೊಟ್ಟರು. ಇದು ನಮ್ಮ ಜೀವನದಲ್ಲೇ ಅತ್ಯಂತ ಸಂತೃಪ್ತಿಯ ದಿನ ಎಂದು ವಾರ್ತಾಭಾರತಿ ಜೊತೆ ಮಾತನಾಡಿದ ಸಾಕೋ ಕಂಪೆನಿಯ ನಿರ್ದೇಶಕರಾದ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಹೇಳಿದರು.

ಈ ಪ್ರಯತ್ನದಲ್ಲಿ ನಮಗೆ ಸೌದಿಯಲ್ಲಿನ ಭಾರತೀಯ ರಾಯಭಾರ ಕಚೇರಿ, ಕರ್ನಾಟಕ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಮಾಜಿ ಸಚಿವ ಯು.ಟಿ. ಖಾದರ್, ಕರ್ನಾಟಕ ಅನಿವಾಸಿ ಭಾರತೀಯರ ಸಮಿತಿಯ ಮಾಜಿ ಉಪಾಧ್ಯಕ್ಷೆ  ಡಾ. ಆರತಿ ಕೃಷ್ಣ ಮತ್ತಿತರರು ಬಹಳ ಸಹಕಾರ ನೀಡಿದ್ದಾರೆ ಎಂದು ಅಲ್ತಾಫ್ ಉಳ್ಳಾಲ್ ಹೇಳಿದರು.

ವ್ಯಾಪಕ ಪ್ರಶಂಸೆ

ಸಾಕೋ ಸಂಸ್ಥೆಯ ಈ ವಿಶಿಷ್ಟ ಸಮಾಜ ಸೇವೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸೌದಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದ ಬಗ್ಗೆ ಕಳೆದ 2-3 ತಿಂಗಳುಗಳಿಂದಲೇ ವರದಿಗಳು, ವಿಡಿಯೋಗಳು ಬರುತ್ತಿದ್ದವು. ಆದರೆ ಅತಂತ್ರ ಭಾರತೀಯರಿಗಾಗಿ ವಿಶೇಷ ವಿಮಾನ ಯೋಜನೆ ಪ್ರಾರಂಭವಾದ ಬಳಿಕವೂ ಸೌದಿಯಿಂದ ಮಂಗಳೂರಿಗೆ ಒಂದೂ ವಿಮಾನ ನಿಗದಿಯಾಗಿರಲಿಲ್ಲ. ಹಾಗಾಗಿ ಈ ಬಗ್ಗೆ ಭಾರೀ ಅಸಮಾಧಾನ ವ್ಯಕ್ತವಾಗಿತ್ತು. ಬಳಿಕ ಎಕ್ಸ್ ಪರ್ಟೈಸ್ ಹಾಗು ಅಲ್ ಮುಝೈನ್ ಕಂಪೆನಿಗಳು ತಮ್ಮ ಅತಂತ್ರ ಉದ್ಯೋಗಿಗಳಿಗಾಗಿ ಬಾಡಿಗೆ ವಿಮಾನ ಕಳಿಸಿದವು. ಈಗ ಸಾಕೋ ಸಂಕಷ್ಟದಲ್ಲಿರುವ ಸಾರ್ವಜನಿಕರಿಗಾಗಿ ಬಾಡಿಗೆ ವಿಮಾನ ನೇಮಿಸಿ ಕಳಿಸಿದ್ದು ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಯುವ ಉದ್ಯಮಿಗಳಾದ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಅವರು ಹಲವಾರು ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಈಗಾಗಲೇ ಗಮನ ಸೆಳೆದಿದ್ದರು. ಈ ಬಾರಿ ಇಂತಹದೊಂದು ವಿಶಿಷ್ಟ ಹಾಗು ಭಾರೀ ಖರ್ಚು ತಗಲುವ ಯೋಜನೆಯನ್ನು ಜನರಿಗಾಗಿ ಮಾಡಿ ನೂರಾರು ಜನರ ಸಂಕಷ್ಟ ನಿವಾರಿಸುವ ಕೆಲಸ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News