ಪುತ್ತೂರು: ಬಾವಿಗೆ ಹಾರಿ ಬೀದಿಬದಿ ವ್ಯಾಪಾರಿ ಆತ್ಮಹತ್ಯೆ

Update: 2020-06-11 07:54 GMT

ಪುತ್ತೂರು, ಜೂ.11: ಬೀದಿ ವ್ಯಾಪಾರಿಯೊಬ್ಬರು ತಾವು ವ್ಯವಹಾರ ಮಾಡುತ್ತಿದ್ದ ಅಂಗಡಿಯ ಬದಿಯಲ್ಲಿದ್ದ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮುಂಜಾನೆ ನಡೆದಿದೆ.

ಬನ್ನೂರು ಗ್ರಾಮದ ನಂದಿಲ ನಿವಾಸಿಯಾಗಿದ್ದ ವಿಠಲ್ ನಾಯ್ಕ್ (63) ಆತ್ಮಹತ್ಯೆ ಮಾಡಿಕೊಂಡವರು. ನಗರದ ಪಡೀಲ್ ನಲ್ಲಿ ಹಲವು ಸಮಯದಿಂದ ತಳ್ಳುಗಾಡಿಯಲ್ಲಿ ಕಬಾಬ್ ಮಾರಾಟ ಮಾಡುತ್ತಿದ್ದ ವಿಠಲ್ ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ರೂ. ಲಕ್ಷಕ್ಕೂ ಹೆಚ್ಚು ವೆಚ್ಚವಾಗಿತ್ತು. ಈ ನಡುವೆ ಕೊರೋನ ಲಾಕ್ಡೌನ್ ಸಮಸ್ಯೆಯಿಂದ ಅವರ ವ್ಯಾಪಾರವೂ ಸ್ಥಗಿತಗೊಂಡಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಲಾಕ್ ಡೌನ್ ಸಡಿಲಿಕೆ ನಂತರ ವ್ಯಾಪಾರ ಪ್ರಾರಂಭ ಮಾಡಿದ್ದರೂ ವ್ಯಾಪಾರ ಸಮರ್ಪಕವಾಗಿ ನಡೆಯುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಇವೆಲ್ಲದರಿಂದ ಮಾನಸಿಕವಾಗಿ ನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ನಂದಿಲದ ತನ್ನ ನಿವಾಸದಲ್ಲಿ ಜೂ.10ರಂದು ರಾತ್ರಿ ಊಟ ಮಾಡಿ ಹೊರಗೆ ಹೋದ ವಿಠಲ್ ನಾಯ್ಕ್ ಬಳಿಕ ನಾಪತ್ತೆಯಾಗಿದ್ದರು. ಮನೆ ಮಂದಿ ಪರಿಸರದಲ್ಲಿ ಹುಡುಕಾಡಿದ್ದರು. ಗುರುವಾರ ಮುಂಜಾನೆ ಪಡೀಲಿನ ಸರಕಾರಿ ಬಾವಿಕಟ್ಟೆಯಲ್ಲಿ ಚಪ್ಪಲಿ ಮತ್ತು ಬಟ್ಟೆಯನ್ನು ಪತ್ತೆಯಾಗಿತ್ತು. ಬಳಿಕ ಆಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದರು. ಮೃತರು ಪತ್ನಿ ಮೂವರು ಪುತ್ರಿಯರು, ಓರ್ವ ಪುತ್ರನ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News