ಮಡಂತ್ಯಾರು: ‘ಸ್ನೇಹಾಲಯ’ದ ನೆರವಿನಿಂದ ನಿರ್ಮಿಸಿದ ಮನೆ ಫಲಾನುಭವಿಗೆ ಹಸ್ತಾಂತರ
ಮಂಗಳೂರು, ಜೂ.11: ಕೊರೋನ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿ ಅರ್ಧಕ್ಕೆ ನಿಂತಿದ್ದ ಮಡಂತ್ಯಾರಿನ ಲಿಯೋ ಡಿಕುನ್ಹಾ ಎಂಬವರಿಗೆ ಮನೆಯನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ತನ್ನ ವಸತಿ ಯೋಜನೆಯ ಮೂಲಕ ಪೂರ್ಣಗೊಳಿಸಿದೆ. ಮನೆಯ ಹಸ್ತಾಂತರ ಕಾರ್ಯಕ್ರಮ ಜೂ.10ರಂದು ನಡೆಯಿತು.
ಲಿಯೋ ಡಿಕುನ್ಹಾ 5 ಲಕ್ಷ ರೂ. ಬ್ಯಾಂಕ್ ಸಾಲ ತೆಗೆದರೂ ಮನೆ ಸಂಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದನ್ನು ಅರಿತ ಸ್ನೇಹಾಲಯ ತಂಡವು ಈ ಕುಟುಂಬವನ್ನು ಸಂದರ್ಶಿಸಿ ಮನೆಯನ್ನು ಸಂಪೂರ್ಣಗೊಳಿಸುವ ಜವಾಬ್ದಾರಿ ವಹಿಸಿಕೊಂಡಿತು. ಅರ್ಧದಲ್ಲಿ ಸ್ಥಗಿತಗೊಂಡಿದ್ದ ಮನೆಯನ್ನು ಸಿವಿಲ್ ಇಂಜಿನಿಯರ್ ಆಗಿರುವ ಹಾಗೂ ಸ್ನೇಹಾಲಯದ ಎನ್‌ಐಟಿ ಮುಖ್ಯಸ್ಥ ಮಡಂತ್ಯಾರಿನ ಸಂತೋಷ್ ನೇತೃತ್ವದಲ್ಲಿ ಪೂರ್ಣಗೊಳಿಸಲಾಯಿತು.
ಸ್ನೇಹಾಲಯವು ನೂತನ ಮನೆಯನ್ನು ಜೂ.10ರಂದು ಲಿಯೋ ಡಿಕುನ್ಹಾ ಕುಟುಂಬಕ್ಕೆ ಹಸ್ತಾಂತರಿಸಿತು. ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೌಮ್ಯಾ ನೂತನ ಮನೆಯನ್ನು ಉದ್ಘಾಟಿಸಿದರು. ಮಡಂತ್ಯಾರು ನೂರುಲ್ ಹುದಾ ಮಸೀದಿಯ ಅಬ್ದುಲ್ ರಝಾಕ್ ನಾಮಫಲಕವನ್ನು ಅನಾವರಣಗೊಳಿಸಿದರು. ಮಡಂತ್ಯಾರ್ ಸೇಕ್ರೆಡ್ ಚರ್ಚ್‌ನ ಧರ್ಮಗುರು ಸ್ಟಾನಿ ಪಿಂಟೊ ಆಶೀರ್ವದಿಸಿದರು.
ಲಿಯೋ ಡಿಕುನ್ಹಾರ ಪುತ್ರಿ ಮೆಲಿಟಾ ಡಿಕುನ್ಹಾ ಮನೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ದಾನಿಗಳಿಗೆ, ಸ್ನೇಹಾಲಯದ ಸ್ವಯಂಸೇವಕರಿಗೆ, ಹಿತೈಷಿಗಳಿಗೆ ವಂದಿಸಿದರು.
ಫಲಾನುಭವಿಗಳು ಮನೆಯ ಹೆಸರನ್ನು ‘ಸ್ನೇಹಾಲಯ’ವೆಂದು ನಾಮಕರಣಗೊಳಿಸಿ, ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜೋಸೆಫ್ ಕ್ರಾಸ್ತಾ, ಸ್ನೇಹಾಲಯದ ಟ್ರಸ್ಟಿಗಳು, ಘಟಕ ಸದಸ್ಯರು ಉಪಸ್ಥಿತರಿದ್ದರು. ಸ್ನೇಹಾಲಯದ ಸಾಮಾಜಿಕ ಕಾರ್ಯಕ್ರಮದ ಮುಖ್ಯಸ್ಥ ಜಿಯೋ ಡಿಸಿಲ್ವಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ, ಸ್ನೇಹಾಲಯದ ಸ್ವಯಂಸೇವಾ ತಂಡಗಳು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅರ್ಹ ಕುಟುಂಬಗಳನ್ನು ಭೇಟಿ ಮಾಡಿ, ಅವರ ಅಗತ್ಯಗಳಿಗೆ ಸ್ಪಂದಿಸಿದೆ. ಸುಮಾರು 1000ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ನೆರವು ನೀಡಲಾಗಿದೆ ಎಂದು ಟ್ರಸ್ಟ್ ಪ್ರಕಟನೆ ತಿಳಿಸಿದೆ.