×
Ad

ಸಂಕಷ್ಟದಲ್ಲಿದ್ದ ಉಸ್ತಾದರ ಮಗುವಿನ ಚಿಕಿತ್ಸೆಗೆ ನೆರವಾದ ಟೀಂ ಬಿ ಹ್ಯೂಮನ್

Update: 2020-06-11 15:42 IST

ಮಂಗಳೂರು, ಜೂ.11: ನೊಂದವರಿಗೆ ಧ್ವನಿಯಾಗುತ್ತಿರುವ ಮತ್ತು ಅಸಹಾಯಕರಿಗೆ ನೆರವಾಗುತ್ತಿರುವುದರಲ್ಲಿ ಮುಂಚೂಣಿಯಲ್ಲಿರುವ ‘ಟೀಂ ಬಿ ಹ್ಯೂಮನ್’ ತಂಡವು ಕಿನ್ಯಾದ ಉಮರ್ ಫಾರೂಕ್ ಉಸ್ತಾದರ ಮಗುವಿನ ಚಿಕಿತ್ಸೆಗೆ 1 ಲಕ್ಷ ರೂ. ದೇಣಿಗೆ ನೀಡಿದೆ.

ಕೊಡಾಜೆಯ ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ಮುಅಲ್ಲಿಮರಾಗಿರುವ ಕಿನ್ಯದ ಉಮ್ಮರ್ ಫಾರೂಕ್ ಉಸ್ತಾದ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ತುಂಬಾ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಬೀಸಿದ ಗಾಳಿಮಳೆಗೆ ಇವರ ಮನೆಗೆ ಹಾನಿ ಸಂಭವಿಸಿದ್ದು, ಸಾಲ ಮಾಡಿ ಅದನ್ನು ದುರಸ್ತಿಗೊಳಿಸಿದ್ದರು. ಈ ಮಧ್ಯೆ ಮೂರು ವರ್ಷ ಹತ್ತು ತಿಂಗಳ ಗಂಡು ಮಗು ಇಬ್ರಾಹೀಂ ಬಾತಿಷ್‌ನ ಮೈಮೇಲೆ ಬಿಸಿ ನೀರು ಬಿದ್ದ ಪರಿಣಾಮ ಶೇ.80ರಷ್ಟು ಸುಟ್ಟ ಗಾಯದೊಂದಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 2 ವರ್ಷದ ಪ್ರಾಯದ ದಾವೂದ್ ಹಕೀಂ ಎಂಬ ಇನ್ನೊಬ್ಬ ಮಗ ಕಿಡ್ನಿ ವೈಫಲ್ಯದಿಂದ ಮನೆಯಲ್ಲೇ ಇದ್ದ. ಕಡು ಬಡತನದಿಂದಾಗಿ ಉಮರ್ ಫಾರೂಕ್ ಉಸ್ತಾದ್ ತನ್ನ ಮಕ್ಕಳಿಗೆ ಚಿಕಿತ್ಸೆ ಕೊಡಲಾಗದೆ ಪರಿತಪಿಸುತ್ತಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸಂದೇಶವನ್ನು ಗಮನಿಸಿದ ‘ಟೀಂ ಬಿ ಹ್ಯೂಮನ್’ ತಂಡವು ತಕ್ಷಣ ಸ್ಪಂದಿಸಿತು. ಅಂದರೆ 1 ಲಕ್ಷ ರೂ.ನ ಚೆಕ್‌ನ್ನು ಉಮರ್ ಫಾರೂಕ್ ಉಸ್ತಾದರಿಗೆ ಹಸ್ತಾಂತರಿಸುವ ಮೂಲಕ ಉದಾರತೆ ಮೆರೆದರು. ಅಲ್ಲದೆ ತನ್ನ ಸ್ನೇಹಿತರ ಗಮನ ಸೆಳೆದು ಸುಮಾರು 70 ಸಾವಿರ ರೂ.ವನ್ನು ಉಸ್ತಾದರ ಖಾತೆಗೆ ಜಮೆ ಮಾಡಿಸಿದರು. 

ಸುಟ್ಟ ಗಾಯದಿಂದ ಚಿಕಿತ್ಸೆ ಪಡೆಯುತ್ತಿರುವ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗೆ ‘ಟೀಂ ಬಿ ಹ್ಯೂಮನ್’ ನಿಗಾ ವಹಿಸಲಿದೆ. ದಾನಿಗಳು ಇವರಿಗೆ ನೆರವು ನೀಡಲು ಬಯಸುವುದಾದರೆ ‘ಟೀಂ ಬಿ ಹ್ಯೂಮನ್’ ತಂಡವನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಚೆಕ್ ಹಸ್ತಾಂತರದ ವೇಳೆ ‘ಟೀಂ ಬಿ ಹ್ಯೂಮನ್’ನ ಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್, ಸದಸ್ಯರಾದ ಭಾಷಾ ಕಂಡತ್‌ಪಳ್ಳಿ, ಅಲ್ತಾಫ್, ಸಾದಿಕ್, ಶಮೀಮ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News