ಅಮ್ಮೆಂಬಳ-ಜಾರದಗುಡ್ಡೆ ಶಾಲಾ ರಕ್ಷಕ-ಶಿಕ್ಷಕರ ಸಭೆ
Update: 2020-06-11 17:50 IST
ಮಂಗಳೂರು,ಜೂ.11: ಬೋಳಿಯಾರು ಗ್ರಾಮದ ಅಮ್ಮೆಂಬಳ-ಜಾರದಗುಡ್ಡೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕರ ಸಭೆ ಇಂದು ನಡೆಯಿತು.
ಶಾಲೆ ಆರಂಭ ಮಾಡುವ ಬಗ್ಗೆ ಹಾಗೂ ಮಕ್ಕಳ ಸುರಕ್ಷತೆ ಕಾಪಾಡುವ ಬಗ್ಗೆ ಚರ್ಚೆ ನಡೆಸಿದ ಸಭೆಯು ಕೋವಿಡ್-19 ನಿಯಂತ್ರಣಕ್ಕೆ ಬಂದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಗತ್ಯ ಸುರಕ್ಷಿತ ಕ್ರಮಗಳೊಂದಗೆ ಶಾಲೆ ಆರಂಭ ಮಾಡಬಹುದೆಂದು ಎಲ್ಲಾ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಶಾಲಾ ಮೂಲಭೂತ ಸೌಕರ್ಯಗಳನ್ನು ಪೂರೈಸಲು ದಾನಿಗಳನ್ನು ಸಂಪರ್ಕಿಸುವ ಕುರಿತು ಕೂಡಾ ಚರ್ಚೆ ನಡೆಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿಯಾದ ಮೋನಿಕಾ ಡಿ’ಮಸ್ಕರೇನಸ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ದೇರಳಕಟ್ಟೆ ಮುಖ್ಯ ಶಿಕ್ಷಕರ ಕ್ಲಸ್ಟರ್ ಸಿ.ಆರ್.ಪಿ. ರಾಜೇಶ್ವರಿ, ಎಸ್‌ಡಿಎಂಸಿ ಅಧ್ಯಕ್ಷ ಸಿ. ರಿಯಾಝ್, ಸಹ ಶಿಕ್ಷಕರಾದ ಜೋಸ್ಪಿನ್ ಪಾಯಸ್, ಗಾಯತ್ರಿ, ಕಿರಣ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಇಂತಿಯಾಝ್ ಬಾಪು ಅಮ್ಮೆಂಬಳ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.