×
Ad

ಜೂ.12: ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

Update: 2020-06-11 18:14 IST

ಉಡುಪಿ, ಜೂ.11: ಅಂತಾರಾಷ್ಟ್ರೀಯ ಕಾರ್ಮಿಕರ ಸಂಘಟನೆಯ ನಿರ್ಣಯದಂತೆ ಜೂ.12ರಂದು ವಿಶ್ವದಾದ್ಯಂತ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಯೋಜಿಸಲಾಗುತ್ತಿದೆ.

ಈ ಮೂಲಕ ವಿಶ್ವದಾದ್ಯಂತ ಜನರಿಗೆ ಬಾಲಕಾರ್ಮಿಕತೆಯ ಬಗ್ಗೆ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಕೋವಿಡ್-19ರ ಹಿನ್ನೆಲೆ ಯಲ್ಲಿ ಮಕ್ಕಳನ್ನು ಬಾಲಕಾರ್ಮಿಕತೆಯಿಂದ ರಕ್ಷಿಸಲು ಹಿಂದೆಂದಿಗಿಂತಲೂ ಹೆಚ್ಚು ಶ್ರಮಿಸುವ ಆಶಯವನ್ನು ಹೊಂದಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಹಿಂಜರಿಕೆ, ಕಾರ್ಮಿಕರ ಜೀವನ ಹಾಗೂ ಜೀವನೋಪಾಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಈ ಬಿಕ್ಕಟ್ಟು ಸಾವಿರಾರು ದುರ್ಬಲ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಮಕ್ಕಳನ್ನು ಕಾರ್ಮಿಕ ಪದ್ಧತಿಗೆ ತಳ್ಳುವ ಸಾಧ್ಯತೆ ಇದೆ.

ಮಕ್ಕಳು ಕಷ್ಟಕರವಾದ ಮತ್ತು ಹೆಚ್ಚು ಸಮಯ ಕೆಲಸ ಮಾಡುವ ಸಂದರ್ಭಗಳನ್ನು ಎದುರಿಸುವ ಅಪಾಯ ಎದುರಾಗುವ ಸಾಧ್ಯತೆ ಇರುವು ದರಿಂದ, ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 1986ರ ಉಲ್ಲಂಘನೆ ಶಿಕ್ಷಾರ್ಹ ಅಪರಾಧ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ವೃತ್ತಿ ಮತ್ತು ಪ್ರಕ್ರಿಯೆಗಳಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು ಮತ್ತು ಅವಕಾಶ ಕಲ್ಪಿಸಿಕೊಡುವುದು ನಿಷೇಧಿಸಲ್ಪಟ್ಟಿದೆ.

14ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯ ಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲಕರಿಗೆ 6 ತಿಂಗಳಿಗೆ ಕಡಿಮೆ ಇಲ್ಲದಂತೆ 2 ವರ್ಷದ ವರೆಗೆ ಜೈಲು ಶಿಕ್ಷೆ, ಕನಿಷ್ಠ 20,000 ರೂ.ನಿಂದ ಗರಿಷ್ಠ 50,000 ರೂ.ವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಅವಕಾಶವಿದೆ.

ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದಂತೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಜೂ.12ರ ಶುಕ್ರವಾರ ಶುಕ್ರವಾರದಂದು ಜಿಲ್ಲಾಡಳಿತ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಹಾಗೂ ಚೈಲ್ಡ್‌ಲೈನ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಆಟೋ ಜಾಥದ ಮೂಲಕ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಪ್ರಚಾರಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News