ಸಿಜಿಎಸ್‌ಎಸ್ ಫಲಾನುಭವಿಗಳಿಗೆ ಚಿಕಿತ್ಸೆ ನಿರಾಕರಿಸದಂತೆ ಆಸ್ಪತ್ರೆಗಳಿಗೆ ಕೇಂದ್ರದ ಎಚ್ಚರಿಕೆ

Update: 2020-06-11 13:46 GMT

ಹೊಸದಿಲ್ಲಿ,ಜೂ.11: ಮೋದಿ ಸರಕಾರವು ಕೋವಿಡ್-19 ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆ ನಿರಾಕರಣೆಯ ವಿರುದ್ಧ ಕೇಂದ್ರ ಸರಕಾರಿ ಆರೋಗ್ಯ ಯೋಜನೆ (ಸಿಜಿಎಚ್‌ಎಸ್)ಯಡಿ ನೋಂದಾಯಿತ ಎಲ್ಲ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದೆ.

 ಆಸ್ಪತ್ರೆಗಳು ರೋಗಿಗಳಿಗೆ ನಿಗದಿತ ಶುಲ್ಕಗಳನ್ನು ವಿಧಿಸಬೇಕು ಇಲ್ಲವೇ ಕ್ರಮಗಳನ್ನು ಎದುರಿಸಬೇಕು ಎಂದು ಸಿಜಿಎಚ್‌ಎಸ್ ನಿರ್ದೇಶಕ ಡಾ.ಸಂಜಯ ಜೈನ್ ಅವರು ಜೂ.9ರ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಯೋಜನೆಯಡಿ ಕೋವಿಡ್-19 ಮತ್ತು ಇತರ ಅನಾರೋಗ್ಯಗಳಿಗೆ ಈ ಆಸ್ಪತ್ರೆಗಳಿಗೆ ದಾಖಲಾಗಲು ಮತ್ತು ಚಿಕಿತ್ಸೆ ಪಡೆಯಲು ಫಲಾನುಭವಿಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ದೂರುಗಳು ಬಂದಿರುವುದನ್ನು ಆದೇಶದಲ್ಲಿ ಉಲ್ಲೇಖಿಸಿರುವ ಅವರು,ಇಂತಹ ದೂರುಗಳನ್ನು ಪುನರ್‌ಪರಿಶೀಲಿಸಲಾಗುವುದು ಮತ್ತು ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಶೇಷ ಕೋವಿಡ್ ಆಸ್ಪತ್ರೆಗಳೆಂದು ಅಧಿಸೂಚಿತವಲ್ಲದ ಸಿಜಿಎಚ್‌ಎಸ್ ಆಸ್ಪತ್ರೆಗಳು ಇತರ ಎಲ್ಲ ಚಿಕಿತ್ಸೆಗಳಿಗಾಗಿ ಫಲಾನುಭವಿಗಳಿಗೆ ಅವಕಾಶವನ್ನು ನಿರಾಕರಿಸುವಂತಿಲ್ಲ ಮತ್ತು ಅವರಿಗೆ ಸಿಜಿಎಚ್‌ಎಸ್ ನಿಗದಿ ಪಡಿಸಿದ ಶುಲ್ಕಗಳನ್ನೇ ವಿಧಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಜೂನ್ 10ರಂದು ಹೊರಡಿಸಿದ ಇನ್ನೊಂದು ಆದೇಶದಲ್ಲಿ ಡಾ.ಜೈನ್ ಅವರು,ಕೊರೋನ ವೈರಸ್ ಹಿನ್ನೆಲೆಯಲ್ಲಿ ಸಿಜಿಎಚ್‌ಎಸ್ ಅಡಿಯ ಎಲ್ಲ ಆಸ್ಪತ್ರೆಗಳು ಫೀವರ್ ಕ್ಲಿನಿಕ್‌ಗಳನ್ನು ಕಡ್ಡಾಯವಾಗಿ ಆರಂಭಿಸಬೇಕು ಮತ್ತು ಯೋಜನೆಯಡಿ ದೇಶಾದ್ಯಂತ ನಗದುರಹಿತ ಚಿಕಿತ್ಸೆಗೆ ಅರ್ಹರಾಗಿರುವ 35 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಈ ಕ್ಲಿನಿಕ್‌ಗಳ ಸೇವೆ ದೊರೆಯಬೇಕು ಎಂದು ತಿಳಿಸಿದ್ದಾರೆ. ಜ್ವರ ಕೋವಿಡ್-19ರ ಪ್ರಮುಖ ಲಕ್ಷಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News