​ನೂತನ ಮಾಧ್ಯಮ ನೀತಿಯ ವಿರುದ್ಧ ಜಮ್ಮು-ಕಾಶ್ಮೀರದ ಪಕ್ಷಗಳ ಆಕ್ರೋಶ

Update: 2020-06-11 13:51 GMT

ಶ್ರೀನಗರ,ಜೂ.11: ಜಮ್ಮು-ಕಾಶ್ಮೀರ ಆಡಳಿತವು ‘ನಕಲಿ ವರದಿಗಳ ’ ಕುರಿತು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲು ತನಗೆ ತಾನೇ ನಿರಂಕುಶ ಅಧಿಕಾರವನ್ನು ಕೊಟ್ಟುಕೊಂಡಿದೆ. ಆಡಳಿತದ ಈ ಕ್ರಮವು ಈ ಅಶಾಂತ ಪ್ರದೇಶದಿಂದ ಸುದ್ದಿಗಳ ಹರಿವಿನ ಮೇಲೆ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸುವ ಪ್ರಯತ್ನವಾಗಿರುವಂತಿದೆ.

ನೂತನ ಮಾಧ್ಯಮ ನೀತಿಯಡಿ ಆಡಳಿತವು ಪತ್ರಕರ್ತರ ವಿರುದ್ಧ ಕಾನೂನು ಕ್ರಮದಿಂದ ಹಿಡಿದು ಮಾಧ್ಯಮ ಸಂಸ್ಥೆಗಳಿಗೆ ಜಾಹೀರಾತುಗಳನ್ನು ಸ್ಥಗಿತಗೊಳಿಸುವವರೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

ಆಡಳಿತವು ಪ್ರಕಟಿಸಿರುವ ‘ಮಾಧ್ಯಮ ನೀತಿ-2020’ ನಕಲಿ ಸುದ್ದಿಗಳು,ಕೃತಿಚೌರ್ಯ ಮತ್ತು ನೀತಿಬಾಹಿರ ಅಥವಾ ರಾಷ್ಟ್ರವಿರೋಧಿ ಚಟುವಟಿಕೆಗಳಿಗಾಗಿ ಮುದ್ರಣ,ವಿದ್ಯುನ್ಮಾನ ಮತ್ತು ಇತರ ರೂಪಗಳ ಮಾಧ್ಯಮಗಳ ಕಂಟೆಂಟ್‌ಗಳನ್ನು ಪರೀಕ್ಷಿಸುವ ಅಧಿಕಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಗಳ ನಿರ್ದೇಶನಾಲಯ (ಡಿಐಪಿಆರ್)ಕ್ಕೆ ನೀಡಿದೆ.

ನೂತನ ನೀತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಅದನ್ನು ‘ವಸಾಹತುಶಾಹಿ ಯುಗದ ಪಳೆಯುಳಿಕೆ ’ಮತ್ತು ’ಪತ್ರಿಕಾ ಸ್ವಾತಂತ್ರ ದಮನದ ಕರಾಳ ಯುಗ ’ ಎಂದು ಬಣ್ಣಿಸಿವೆ.

ಜಮ್ಮು-ಕಾಶ್ಮೀರ ಆಡಳಿತವು ಇದೇ ಮೊದಲ ಬಾರಿಗೆ ಯಾವುದು ನಕಲಿ ಸುದ್ದಿ ಎನ್ನುವುದನ್ನು ನಿರ್ಧರಿಸುವ ಮತ್ತು ಪತ್ರಕರ್ತರು ಹಾಗೂ ಮಾಧ್ಯಮಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ತನ್ನ ಅಧಿಕಾರಿಗಳಿಗೆ ನೀಡುವ ನೀತಿಯನ್ನು ಹೊರತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News