ಅಮೆರಿಕ: ಸೆಪ್ಟಂಬರ್‌ನಲ್ಲಿ 2 ಲಕ್ಷ ತಲುಪುವ ಕೊರೋನ ಸಾವು; ಪರಿಣತ ಎಚ್ಚರಿಕೆ
ವಾಶಿಂಗ್ಟನ್, ಜೂ. 11: ಅಮೆರಿಕದಲ್ಲಿ ನೂತನ-ಕೊರೋನ ವೈರಸ್‌ನಿಂದಾಗಿ ಸಾಯುವವರ ಸಂಖ್ಯೆ ಸೆಪ್ಟಂಬರ್‌ನಲ್ಲಿ 2 ಲಕ್ಷವನ್ನು ತಲುಪಬಹುದು ಎಂದು ಹಾರ್ವರ್ಡ್‌ನ ಗ್ಲೋಬಲ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಆಶಿಶ್ ಝಾ ಹೇಳಿದ್ದಾರೆ.
ಅಮೆರಿಕದ ಒಟ್ಟು ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಬುಧವಾರ 20 ಲಕ್ಷವನ್ನು ದಾಟಿದೆ.
ಕಟ್ಟುನಿಟ್ಟಿನ ಕ್ರಮಗಳ ಅನುಪಸ್ಥಿತಿಯಲ್ಲಿ ಅಮೆರಿಕದಲ್ಲಿ ಮಾರಕ ಸಾಂಕ್ರಾಮಿಕದ ಸೋಂಕಿನಿಂದಾಗಿ ಸಾಯುವವರ ಸಂಖ್ಯೆ ದಾಪುಗಾಲಿಡುತ್ತದೆ ಎಂದು ಬುಧವಾರ ಸಿಎನ್‌ಎನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.
‘‘ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚದಿದ್ದರೂ, ಸೋಂಕು ಹರಡುವಿಕೆಯನ್ನು ನಾವು ನಿಯಂತ್ರಣದಲ್ಲಿಟ್ಟರೂ, ಸೆಪ್ಟಂಬರ್ ತಿಂಗಳಲ್ಲಿ ನಮ್ಮ ಸಾವಿನ ಸಂಖ್ಯೆ 2 ಲಕ್ಷವನ್ನು ತಲುಪುವ ಎಲ್ಲ ಸಾಧ್ಯತೆಗಳಿವೆ’’ ಎಂದರು. ‘‘ಇದು ಸೆಪ್ಟಂಬರ್‌ವರೆಗಿನ ಅಂಕಿಸಂಖ್ಯೆ ಮಾತ್ರ. ಕಾಯಿಲೆಯು ಸೆಪ್ಟಂಬರ್‌ನಲ್ಲಿ ಕೊನೆಗೊಳ್ಳುವುದಿಲ್ಲ’’ ಎಂದು ಅವರು ನುಡಿದರು.
ಅಮೆರಿಕದ ಕೊರೋನ ವೈರಸ್ ಸಾವುಗಳ ಒಟ್ಟು ಸಂಖ್ಯೆ ಬುಧವಾರದ ವೇಳೆಗೆ 1,12,754ನ್ನು ತಲುಪಿದೆ. ಇದು ಜಗತ್ತಿನಲ್ಲೇ ಅಧಿಕವಾಗಿದೆ.