×
Ad

ಆಟೋರಿಕ್ಷಾ ಮೀಟರ್ ದರ ದೃಢೀಕರಣ ಪ್ರಕ್ರಿಯೆ : ಅಧಿಕ ವೆಚ್ಚ ಪಡೆದರೆ ದೂರು ನೀಡಲು ಸಲಹೆ

Update: 2020-06-11 21:34 IST

ಮಂಗಳೂರು, ಜೂ.11: ಆಟೋರಿಕ್ಷಾ ದರ ಪರಿಷ್ಕರಣೆಗೆ ಅನುಗುಣವಾಗಿ ದೃಢೀಕರಣ ಪ್ರಕ್ರಿಯೆಗೆ ಸಂಬಂಧಿಸಿ ಸಂಘಟನೆಯ ಮನವಿಯ ಮೇರೆಗೆ ವೆಚ್ಚವನ್ನು ಕಡಿತಗೊಳಿಸಿ ಮಾಪನಾಶಾಸ್ತ್ರ ಇಲಾಖೆ ಆದೇಶಿದೆ. ಆದ್ದರಿಂದ ನಿಗದಿಗಿಂತ ಹೆಚ್ಚಿನ ದರ ಪಡೆದರೆ ದೂರು ನೀಡಿ ಎಂದು ಸೋಷಿಯಲ್ ಡೆಮೊಕ್ರಾಟಿಕ್ ಟ್ರೇಡ್ ಯೂನಿಯನ್‌ನ ದ.ಕ. ಜಿಲ್ಲಾ ಸಮಿತಿ ಸಲಹೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ದ.ಕ. ಜಿಲ್ಲೆಯಲ್ಲಿ ಸಂಚರಿಸುವ ಆಟೋ ರಿಕ್ಷಾಪ್ರಯಾಣ ದರವನ್ನು ಎಪ್ರಿಲ್ 1ರಿಂದ ಅನ್ವಯವಾಗುವಂತೆ ಪರಿಷ್ಕೃತ ಗೊಳಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶಿಸಿದೆ ಎಂದರು.

ಪರಿಷ್ಕೃತ ದರದ ಅನ್ವಯ ಆಟೋರಿಕ್ಷಾ ಪ್ರಯಾಣ ದರದ ಮೀಟರ್ ಪರಿಷ್ಕೃತಗೊಳಿಸಲು ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳುವುದು ಮತ್ತು ತೂಕ ಮತ್ತು ಮಾಪನ ಶಾಸ್ತ ಇಲಾಖೆಯಿಂದ ದೃಢೀಕರಿಸುವ ಪ್ರಕ್ರಿಯೆಗೆ ತಾಂತ್ರಿಕ ಡೀಲರ್‌ಗಳಾದ ಪಾಂಡೇಶ್ವರದ ಕರ್ಕೇರ ವೀಡಿಯೋ ಸೆಂಟರ್ ಮತ್ತು ಬಂದರ್‌ನ ಪ್ರತಾಪ್ ಮೀಟರ್ ವರ್ಕ್ಸ್‌ನವರು 550 ರೂ. ವೆಚ್ಚ ನಿಗದಿಪಡಿಸಿದ್ದರು. ಇದು ಚಾಲಕರಿಗೆ ದುಬಾರಿಯಾಗಿರುವುದಾಗಿ ಆಕ್ಷೇಪಿಸಿ ಸಂಘಟನೆಯ ಜಿಲ್ಲಾ ಸಮಿತಿ ನಿಯೋಗ ಜಿಲ್ಲಾಧಿಕಾರಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಲಿಖಿತ ದೂರು ನೀಡಿತ್ತು. ದೂರಿಗೆ ಸ್ಪಂದಿಸಿ ಸರಕಾರದ ಅಧೀನಕ್ಕೆ ಚಲನ್ ರೂಪದಲ್ಲಿ 150 ರೂ. ಹಾಗೂ ಡೀಲರ್‌ಗಳಿಗೆ ಮೀಟರ್ ಜೋಡಣೆ ಮತ್ತು ನಿರ್ವಹಣಾ ವೆಚ್ಚವಾಗಿ 350 ರೂ. ಸೇರಿ ಒಟ್ಟು 500 ರೂ. ನಿಗದಿಪಡಿಸಲಾಗಿದೆ. ಹಾಗಾಗಿ ತಾಂತ್ರಿಕ ಡೀಲರ್‌ಗಳು ಆಟೋ ಚಾಲಕರಿಗೆ ಈ ಹಿಂದೆ ನೀಡುತ್ತಿದ್ದ ಸೇವೆಯನ್ನು ಮುಂದುವರಿಸಬೇಕು. ಆಟೋ ಚಾಲಕರು ಕೂಡಾ ಇದರ ಸದುಪಯೋಗ ಪಡೆಯಬೇಕು. ಈ ಹಿಂದೆ ನೀಡುತ್ತಿದ್ದ ಸೇವೆಯಲ್ಲಿ ಕಡಿತಗೊಳಿಸಿ ಚಾಲಕರಿಗೆ ತೊಂದರೆ ನೀಡಿದರೆ ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿ ಅಥವಾ ಸಂಘಟನೆಯ ಜಿಲ್ಲಾ ನಾಯಕರನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೊಳಕೆ, ಸದಸ್ಯರಾದ ನೌಫಾಲ್ ಕುದ್ರೋಳಿ, ಮಂಗಳೂರು ನಗರ ಸಮಿತಿಯ ಉಪಾಧ್ಯಕ್ಷ ಶಿಯಾಬ್ ಜೆಪ್ಪು, ಕಾರ್ಯದರ್ಶಿ ಶರೀಫ್ ಕುತ್ತಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News