ಕುಡಿಯುವ ನೀರಿನ ಬಿಲ್ ಅವ್ಯವಹಾರ ಪ್ರಕರಣ: ಪಿಡಿಒ ಸಹಿತ ಒಂಬತ್ತು ಮಂದಿಗೆ ದಂಡ

Update: 2020-06-11 17:10 GMT

ಉಪ್ಪಿನಂಗಡಿ : ಬಾರ್ಯ ಗ್ರಾ.ಪಂ.ನಲ್ಲಿ 2017-18ರ ಸಾಲಿನಲ್ಲಿ ರಸೀದಿ ಪುಸ್ತಕಗಳ ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿರುವ ಪ್ರಕರಣವನ್ನು ತನಿಖೆ ನಡೆಸಿರುವ ದ.ಕ. ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯತ್ ಪಿಡಿಓ ಸಹಿತ 6 ಮಂದಿ ಸಿಬ್ಬಂದಿಯನ್ನು ತಪ್ಪಿತಸ್ಥರೆಂದು ತಿಳಿಸಿ, ನಡೆದಿರುವ 10,92,108 ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅದರ 15% ಬಡ್ಡಿ ಹಣ 4,55,861 ರೂಪಾಯಿ ಪಾವತಿ ಮಾಡುವಂತೆ ಆದೇಶಿಸಿದೆ.

2016-17 ಮತ್ತು 2017-18ನೇ ಲೆಕ್ಕ ಪರಿಶೋಧನೆಯಲ್ಲಿ ಸದ್ರಿ ಗ್ರಾಮ ಪಂಚಾಯತ್‍ನಲ್ಲಿ ರಶೀದಿ ಪುಸ್ತಕಗಳನ್ನು ದುರುಪಯೋಗಪಡಿಸಿ ನೀರಿನ ವಸೂಲಿಯಲ್ಲಿ ಕ್ರಮವಾಗಿ 6,92,377 ರೂ. ಮತ್ತು 3,99,731 ಸೇರಿದಂತೆ ಒಟ್ಟು 10,92108 ರಷ್ಟು ಮೊತ್ತವನ್ನು ಬ್ಯಾಂಕಿನಲ್ಲಿರುವ ಸಂಬಂಧಿಸಿದ ಖಾತೆಗೆ ಜಮೆ ಮಾಡಿರದಿರುವುದು ಕಂಡು ಬಂತು. ಇಲ್ಲಿ ಹಣದ ದುರುಪಯೋಗ ನಡೆದಿರುವ ಬಗ್ಗೆ ಸಾರ್ವಜನಿಕರ ದೂರು ಬಂದ ಬಳಿಕ ಈ ಮೊತ್ತವನ್ನು ವಸೂಲಿ ಮಾಡಿ ನೀರಿನ ಖಾತೆಗೆ ಜಮೆ ಮಾಡಲು ಆದೇಶಿಸಲಾಗಿತ್ತು.

ಅದರಂತೆ  ಈ ಹಣವನ್ನು 10 ಕಂತುಗಳಲ್ಲಿ ಪಾವತಿ ಮಾಡಲಾಗಿತ್ತು. ಆದರೆ ದುರುಪಯೋಗಪಡಿಸಿದ ಮೊಬಲಗಿಗೆ ಶೇಕಡಾ 15ರಷ್ಟು ಬಡ್ಡಿ ಪಾವತಿ ಆಗದೇ ಇದ್ದು, ಆದ ಕಾರಣ ವಸೂಲಿ ಆದ ದಿನಾಂಕದಿಂದ ಬಾಕಿಯಾದ ಮೊಬಲಗಿನ ಮೇಲೆ ಶೇ.15ರಷ್ಟು ಬಡ್ಡಿಯನ್ನು ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಯಿಂದ ವಸೂಲಿ ಮಾಡಿ ಪಂಚಾಯತ್ ಜಮೆ ಮಾಡಿದ ಬಗ್ಗೆ ಸೂಕ್ತ ದಾಖಲೆಯೊಂದಿಗೆ ವರದಿ ನೀಡುವಂತೆ ಬೆಳ್ತಂಗಡಿ ತಾ.ಪಂ. ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ತಾಲೂಕು ಪಂಚಾಯತ್  ಕಾರ್ಯನಿರ್ವಹಣಾಧಿಕಾರಿರವರು ಗ್ರಾಮ ಪಂಚಾಯಿತಿನ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪ್ರಸಕ್ತ ಚೆನ್ನರಾಯಪಟ್ಟಣ ಜುಟ್ಟನಹಳ್ಳಿ ಗ್ರಾಮ ಪಂಚಾಯತ್ ಅಬಿವೃದ್ಧಿ ಅಧಿಕಾರಿ ಆಗಿರುವ ಹೆಚ್.ಡಿ. ದೇವರಾಜ್, ಬಾರ್ಯ ಗ್ರಾಮ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜು, ಗುಮಾಸ್ತೆ ಶ್ರೀಮತಿ ಪ್ರಮೀಳ, ತೆರಿಗೆ ವಸೂಲಿಗ ಸಂಜೀವ, ನಳ್ಳಿ ನೀರಿನ ಕರವಸೂಲಿಗ ಮಾಧವ ಮತ್ತು ಗ್ರಾಮ ಪಂಚಾಯತ್ ಜವಾನ ಕುಶಾಲಪ್ಪ ಇವರುಗಳಿಗೆ ನೋಟೀಸು ಜಾರಿ ಮಾಡಿ 4.55 ಲಕ್ಷ ಮರು ಪಾವತಿ ಮಾಡುವಂತೆ ಆದೇಶ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News