ನಾಟೇಕಲ್, ಉರುಮನೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಡಿವೈಎಫ್‍ಐ ಮನವಿ

Update: 2020-06-11 17:49 GMT

ಮಂಜನಾಡಿ : ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟೇಕಲ್, ಉರುಮನೆ ರಸ್ತೆಬದಿಯಲ್ಲಿ ಕಸದ ರಾಶಿ ಬಿದ್ದಿದ್ದು ಇದರಿಂದ ಸಾರ್ವಜನಿಕರಿಗೆ ಮತ್ತು  ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಈ ಕಸದ ರಾಶಿಯನ್ನು ತೆರವುಗೊಳಿಸಿ ಇಲ್ಲಿ ಕಸದ ತೊಟ್ಟಿಯೊಂದನ್ನು ನಿರ್ಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಡಿವೈಎಫ್‍ಐ ದೇರಳಕಟ್ಟೆ ಘಟಕ ವತಿಯಿಂದ ಇಂದು ಮಂಜನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಉರುಮನೆ ರಸ್ತೆ ಬದಿಯಲ್ಲಿರುವ ಕಸದ ರಾಶಿಯಲ್ಲಿ ಆಹಾರ ಪದಾರ್ಥಗಳನ್ನು ತಿನ್ನಲು ನಾಯಿಗಳು ಗುಂಪು ಸೇರುತ್ತಿದ್ದು ಇವು ಬೈಕಿಗೆ ಅಡ್ಡ ಬಂದು ಈಗಾಗಲೇ ಹಲವು ಬೈಕುಗಳು ಸ್ಕಿಡ್ ಆಗಿ ಸವಾರರು ಗಾಯಗೊಂಡ ಘಟನೆಗಳೂ ನಡೆದಿವೆ. ಈ ಹಿಂದೆ ತ್ಯಾಜ್ಯ ವಿಲೇವಾರಿ ವಾಹನ ಬಂದು ಇಲ್ಲಿಂದ ಕಸಗಳನ್ನು ತೆರವುಗೊಳಿಸುತ್ತಿತ್ತು. ಈಗ ಅದೂ ಬರುವುದನ್ನು ನಿಲ್ಲಿಸಿದೆ. ಈ ಪ್ರದೇಶದಲ್ಲಿ ಕಸ ತುಂಬಿ ಗುಡ್ಡೆಯಾಗಿದ್ದು ಪಂಚಾಯತ್ ಕೂಡಲೇ ಈ ಸಮಸ್ಯೆ ಪರಿಹರಿಸಿ ವಾಹನ ಸವಾರರಿಗೆ ಮತ್ತು ಪರಿಸರ ವಾಸಿಗಳಿಗೆ ಅನುಕೂಲತೆ ಕಲ್ಪಿಸಬೇಕೆಂದು ಡಿವೈಎಫ್‍ಐ ನಿಯೋಗ ಒತ್ತಾಯಿಸಿತು.

ನಿಯೋಗದಲ್ಲಿ ಡಿವೈಎಫ್‍ಐ ದೇರಳಕಟ್ಟೆ ಘಟಕದ ಅಧ್ಯಕ್ಷರಾದ ನವಾಝ್, ಕಾರ್ಯದರ್ಶಿ ದಿವಾಕರ್ , ಉಪಾಧ್ಯಕ್ಷ ಜಗದೀಶ್ , ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News