ಪಾಕ್‌ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹಿಂಸಾಚಾರ: ಅಮೆರಿಕದ ವಾರ್ಷಿಕ ಧಾರ್ಮಿಕ ಸ್ವಾತಂತ್ರ್ಯ ವರದಿ

Update: 2020-06-11 18:12 GMT

ವಾಶಿಂಗ್ಟನ್, ಜೂ. 11: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಿಯಾ ಮುಸ್ಲಿಮರು ಮತ್ತು ಅಹ್ಮದಿ ಮುಸ್ಲಿಮರ ಹತ್ಯೆಗಳ ಬಗ್ಗೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಾರ್ಷಿಕ ವರದಿ ಕಳವಳ ವ್ಯಕ್ತಪಡಿಸಿದೆ.

ದೈವನಿಂದನೆ ಆರೋಪಗಳಿಗೆ ಸಂಬಂಧಿಸಿದ ಸಾಮಾಜಿಕ ಹಿಂಸಾಚಾರ, ಇಸ್ಲಾಮ್‌ಗೆ ಮತಾಂತರಗೊಳ್ಳುವಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಕೆಲವರು ಒತ್ತಡ ಹೇರುತ್ತಿರುವುದು ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನು ಗುರಿಯಾಗಿಸಿ ಸಾಮಾಜಿಕ ಕಿರುಕುಳ ನೀಡುವುದು, ತಾರತಮ್ಯ ಮಾಡುವುದು ಹಾಗೂ ಹಿಂಸಾಚಾರದ ಬೆದರಿಕೆಯೊಡ್ಡುವುದು- ಮುಂತಾದ ಹಲವು ಘಟನೆಗಳ ಬಗ್ಗೆ ಮಾನವಹಕ್ಕುಗಳ ಕಾರ್ಯಕರ್ತರು ವರದಿ ಮಾಡಿದ್ದಾರೆ ಎಂದು ‘2019 ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ’ ತಿಳಿಸಿದೆ.

ಜಗತ್ತಿನಾದ್ಯಂತ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆಯುವ ಮಹತ್ವದ ದಾಳಿಗಳನ್ನು ವರದಿಯು ಪ್ರಕಟಿಸುತ್ತದೆ. ವರದಿಯನ್ನು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಬುಧವಾರ ವಿದೇಶಾಂಗ ಇಲಾಖೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ, ಅದರಲ್ಲೂ ಮುಖ್ಯವಾಗಿ ಯುವ ಹಿಂದೂ ಮತ್ತು ಕ್ರೈಸ್ತ ಮಹಿಳೆಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರಗೊಳಿಸಿ, ಬಲವಂತವಾಗಿ ಮದುವೆಯಾಗುವ ಪ್ರಕರಣಗಳು ಪಾಕಿಸ್ತಾನದಲ್ಲಿ ಹೆಚ್ಚುತ್ತಿವೆ ಎಂಬುದಾಗಿ ಎನ್‌ಜಿಒ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ ಎಂದು ವರದಿ ತಿಳಿಸಿದೆ.

‘‘ಹಿಂದೂ, ಕ್ರೈಸ್ತ ಮತ್ತು ಅಹ್ಮದೀಯ ಅಲ್ಪಸಂಖ್ಯಾತರ ಪವಿತ್ರ ಸ್ಥಳಗಳು, ಸ್ಮಶಾನಗಳು ಮತ್ತು ಧಾರ್ಮಿಕ ಚಿಹ್ನೆಗಳ ಮೇಲೆ ನಡೆಯುವ ದಾಳಿಗಳು ನಿರಂತರವಾಗಿ ಮುಂದುವರಿದಿರುವ ವರದಿಗಳಿವೆ’’ ಎಂದು ಅಮೆರಿಕದ ಧಾರ್ಮಿಕ ವರದಿ ಹೇಳಿದೆ.

ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ನಾಗರಿಕ ಸಮಾಜ ಗುಂಪುಗಳು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿವೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News