×
Ad

ಇಂದೋರ್: ಬೋರ್ಡ್ ಪರೀಕ್ಷೆ ವೇಳೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕೂರಿಸಿದ ಶಾಲಾಡಳಿತ

Update: 2020-06-12 17:19 IST
Photo: thehindu.com

ಇಂದೋರ್: ನಗರದ ಬೆಂಗಾಲಿ ಹೈಸ್ಕೂಲಿನಲ್ಲಿ ತಮ್ಮ 12ನೇ ತರಗತಿ ಪರೀಕ್ಷೆಗೆ ಜೂನ್ 9ರಂದು ಹಾಜರಾದ ಅಲ್ಲಿನ ಇಸ್ಲಾಮಿಯಾ ಕರೀಮಿಯಾ ಸೊಸೈಟಿ ಆಡಳಿತದ ಶಾಲೆಯ 47 ವಿದ್ಯಾರ್ಥಿನಿಯರನ್ನು ಅವರ ಧರ್ಮದ ಆಧಾರದಲ್ಲಿ ತರಗತಿಯ ಹೊರಗೆ ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ ಎಂದು ವಿದ್ಯಾರ್ಥಿನಿಯರ ಹೆತ್ತವರು ಆರೋಪಿಸಿದ್ದಾರೆ. ಆದರೆ ಜಿಲ್ಲಾಡಳಿತ ಯಾವುದೇ ತಾರತಮ್ಯ ನಡೆಸಿದ ಆರೋಪ ನಿರಾಕರಿಸಿದೆಯಲ್ಲದೆ ವಿದ್ಯಾರ್ಥಿನಿಯರು ಕೋವಿಡ್-19 ಕಂಟೈನ್ಮೆಂಟ್ ವಲಯಗಳಿಂದ ಬಂದವರಾಗಿದ್ದರಿಂದ ಅವರನ್ನು ಪ್ರತ್ಯೇಕವಾಗಿ ಕೂರಿಸಲಾಗಿತ್ತು ಎಂದು thehindu.com ವರದಿ ಮಾಡಿದೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ್ದ ಅಲ್ಪಸಂಖ್ಯಾತ ಶಾಲೆಯ ವಿದ್ಯಾರ್ಥಿನಿಯರು ತರಗತಿಯ ಹೊರಗೆ ಸಾಂಸ್ಕೃತಿಕ ವೇದಿಕೆಯಲ್ಲಿ ಇರಿಸಲಾಗಿದ್ದ ಬೆಂಚುಗಳಲ್ಲಿ ಕುಳಿತು ಪರೀಕ್ಷೆ ಬರೆದಿದ್ದರು.

ಇದನ್ನು ಗಮನಿಸಿದ್ದ ಹಲವು ಹೆತ್ತವರು ಶಾಲೆಯ ಗೇಟಿನ ಹೊರಗೆ ಪ್ರತಿಭಟಿಸಿದ್ದ ವೀಡಿಯೋವೊಂದನ್ನು ಒಬ್ಬರು ಸೆರೆ ಹಿಡಿದಿದ್ದು ಅದೀಗ ವೈರಲ್ ಆಗಿದೆ. ಅವರನ್ನೇಕೆ ಹೊರಗೆ ಕೂರಿಸಿದಿರಿ ? ಒಳಗೆ ಕೂರಿಸಿ ಎಂದು ಒಬ್ಬರು ಹೆತ್ತವರು ಬೊಬ್ಬೆ ಹೊಡೆಯುವುದು ಕೂಡ ಕೇಳಿಸುತ್ತದೆ.

ಈ ವಿವಾದದ ಕುರಿತು ಪ್ರತಿಕ್ರಿಯಿಸಿದ ಇಂದೋರ್ ಜಿಲ್ಲಾ ಶಿಕ್ಷಣಾಧಿಕಾರಿ ರಾಜೇಂದ್ರ ಬರುವಾ, ಶಾಲೆಗಳಿಂದ ಕಂಟೈನ್ಮೆಂಟ್ ವಲಯಗಳ ವಿದ್ಯಾರ್ಥಿಗಳ ಪಟ್ಟಿಯನ್ನು ಕೇಳಲಾಗಿದ್ದನ್ನು ಒಪ್ಪಿದ್ದಾರೆ. "ಆದರೆ ಬುಕ್ ಕೀಪಿಂಗ್ ಪರೀಕ್ಷೆ ನಡೆದಾಗ 131 ಕೇಂದ್ರಗಳಲ್ಲಿ 22,000 ವಿದ್ಯಾರ್ಥಿಗಳು ಹಾಜರಾಗಿದ್ದರು. ಹಿಂದೆ 500 ವಿದ್ಯಾರ್ಥಿಗಳನ್ನು ಕೂರಿಸುವ ಸ್ಥಳಗಳಲ್ಲಿ 100-150 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಬಹುದಾಗಿದೆ. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ನಾವು ವೆರಾಂಡ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಏರ್ಪಾಟು ಮಾಡಿದ್ದೆವು. ವಿದ್ಯಾರ್ಥಿಗಳ ರೋಲ್ ನಂಬರ್ ಆಧಾರದಲ್ಲಿ ಅವರನ್ನು ಕೂರಿಸಲಾಗಿತ್ತು, ಅವರ ರೋಲ್ ನಂಬರ್ ಹೊರತು ಹೆಸರು ಕೂಡ ತಿಳಿದಿರಲಿಲ್ಲ. ಧರ್ಮದ ಆಧಾರದಲ್ಲಿ ಪ್ರತ್ಯೇಕವಾಗಿ ಕೂರಿಸುವ ಪ್ರಶ್ನೆಯೇ ಇಲ್ಲ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News