11 ವಾರಗಳ ಬಳಿಕ ಉಡುಪಿ ಜಿಲ್ಲೆಯ ಕೆಲವು ಮಸೀದಿಗಳಲ್ಲಿ ಜುಮಾ ನಮಾಝ್

Update: 2020-06-12 11:52 GMT

‌ಉಡುಪಿ, ಜೂ.12: ರಾಜ್ಯ ಸರಕಾರ ಎರಡೂವರೆ ತಿಂಗಳ ನಂತರ ಮಸೀದಿ ತೆರೆಯಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಕೆಲವು ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್ ನೆರವೇರಿಸಲಾಯಿತು.

ಲಾಕ್‌ಡೌನ್‌ನಿಂದಾಗಿ ಮಸೀದಿಗಳು ಮುಚ್ಚಲ್ಪಟ್ಟಿರುವುದರಿಂದ ಜಿಲ್ಲೆಯ ಮಸೀದಿಗಳಲ್ಲಿ ಕಳೆದ 11 ಜುಮಾ ನಮಾಝ್ ನಡೆದಿರಲಿಲ್ಲ. ಇದೀಗ 11 ವಾರಗಳ ಬಳಿಕ ಪ್ರಥಮ ಬಾರಿಗೆ ಜೂ.8ರಿಂದ ತೆರೆಯಲ್ಪಟ್ಟ ಕೆಲವು ಮಸೀದಿ ಗಳಲ್ಲಿ ಸರಕಾರದ ಷರತ್ತುಗಳ ಪಾಲನೆಯೊಂದಿಗೆ ಜುಮಾ ನಮಾಝ್ ನೆರವೇರಿಸಲಾಯಿತು.

ಕಾಪು ಪೊಲಿಪು ಜುಮಾ ಮಸೀದಿ ಮತ್ತು ಉಡುಪಿ ಕರಂಬಳ್ಳಿಯ ಸಂತೋಷ್‌ನಗರದ ಬದ್ರಿಯಾ ಜುಮಾ ಮಸೀದಿಗಳಲ್ಲಿ ಆಯಾ ಜಮಾಅತ್ ನವರಿಗೆ ಮಾತ್ರ ನಮಾಝ್ ಮಾಡಲು ಅವಕಾಶ ಕಲ್ಪಿಸಲಾಯಿತು. ಜುಮಾ ನಮಾಝ್‌ಗಾಗಿ ಮಧ್ಯಾಹ್ನ 12.50ಕ್ಕೆ ಮಸೀದಿಯ ಗೇಟ್ ತೆರೆದಿದ್ದು, ಒಂದು ಗಂಟೆ ಸುಮಾರಿಗೆ ಗೇಟ್ ಬಂದ್ ಮಾಡಲಾಗಿತ್ತು. ಬಳಿಕ ಬಂದವರಿಗೆ ಜುಮಾ ನಮಾಝ್ ನಿರ್ವಹಿಸಲು ಅವಕಾಶ ನಿರಾ ಕರಿಸಲಾಗಿತ್ತು. ಇದರಿಂದ ನಂತರ ಬಂದ ಕೆಲವರು ಮಸೀದಿಯ ಹೊರಗಡೆ ನಮಾಝ್ ಮಾಡುವುದು ಕಂಡುಬಂತು. ಅದೇ ರೀತಿ ಹೂಡೆಯ ಜದೀದ್ ಜುಮಾ ಮಸೀದಿ, ಅಮೀರ್ ಮೊವಿಯ ಮಸೀದಿ, ಕೋಡಿಬೆಂಗ್ರೆ ಜುಮಾ ಮಸೀದಿ, ಗುಜ್ಜರಬೆಟ್ಟು ಮೊಹಿಯ್ಯುದ್ದೀನ್ ಜುಮಾ ಮಸೀದಿಗಳಲ್ಲಿಯೂ ಇಂದು ಜುಮಾ ನಮಾಝ್ ನಿರ್ವಹಿಸಲಾಯಿತು.

ಅದೇ ರೀತಿ ಉಡುಪಿ ಜಿಲ್ಲೆಯ ಜಮೀಯತೆ ಅಹ್ಲೆ ಹದೀಸ್ ಅಧೀನದಲ್ಲಿ ರುವ ಜಿಲ್ಲೆಯ ಮಸೀದಿಗಳಲ್ಲಿಯೂ ಜುಮಾ ನಮಾಝ್ ನಡೆಯಿತು. ಎಲ್ಲ ಮಸೀದಿಗಳಲ್ಲಿಯೂ ಸಮಯದ ಮಿತಿಯೊಳಗೆ ನಮಾಝ್ ನಿರ್ವಹಿಸಲಾಯಿತು. ನಮಾಝ್‌ಗೆ ಮೊದಲು ಮತ್ತು ನಂತರ ಮಸೀದಿಯನ್ನು ಸ್ಯಾನಿಟೈಸ್ ಮಾಡಲಾಯಿತು. ಎಲ್ಲರು ಮಾಸ್ಕ್ ಧರಿಸಿ ನಮಾಝ್ ನಿರ್ವಹಿಸಿ ದರು. ಕೆಲವು ಮಸೀದಿಗಳಲ್ಲಿ ಪ್ರವೇಶ ದ್ವಾರಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜಿಸಿ ಶಿಸ್ತುಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಲಾಯಿತು. ಆದರೆ ಈಗಾಗಲೇ ತೆರೆಯದ ಉಡುಪಿ ಜಾಮೀಯ, ಅಂಜುಮಾನ್ ಮಸೀದಿ, ಮೂಳೂರು ಕೇಂದ್ರ ಜುಮಾ ಮಸೀದಿ, ನಾಯರ್‌ಕೆರೆ ಮಸೀದಿ, ಗಂಗೊಳ್ಳಿ, ನಾವುಂದ, ಕಾರ್ಕಳ, ಪಡುಬಿದ್ರೆ ಸೇರಿದಂತೆ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಇಂದಿನ ಜುಮಾ ನಮಾಝ್ ನಡೆದಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News