×
Ad

ಜೂ.14ರಂದು ಕರ್ನಾಟಕ ಬಿಜೆಪಿಯಿಂದ ವರ್ಚುವಲ್ ರ್ಯಾಲಿ

Update: 2020-06-12 18:12 IST

ಉಡುಪಿ, ಜೂ.12: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಎರಡನೇ ಅವಧಿಯ ಪ್ರಥಮ ವರ್ಷದ ಸಾಧನೆಗಳು ಮತ್ತು ಆತ್ಮ ನಿರ್ಭರ ಭಾರತ ಪರಿಕಲ್ಪನೆಯೊಂದಿಗೆ ಕೇಂದ್ರ ಸರಕಾರದ ವಿವಿಧ ಯೋಜನೆ ಗಳನ್ನು ರಾಜ್ಯದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಕರ್ನಾಟಕ ವತಿ ಯಿಂದ ತಂತ್ರಜ್ಞಾನ ಆಧಾರಿತ ವರ್ಚುವಲ್ ರ್ಯಾಲಿ ನಡೆಯಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ರ್ಯಾಲಿ ಜೂ.14ರಂದು ಬೆಳಗ್ಗೆ 10 ಗಂಟೆ ಹಾಗೂ ಸಂಜೆ 6ಗಂಟೆಗೆ ರಾಜ್ಯಮಟ್ಟದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿ ಆಡಳಿತದ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ಸಾಧನೆಗಳ ಕರಪತ್ರವನ್ನು ಮನೆಮನೆಗೆ ವಿತರಿಸುವ ಅಭಿಯಾನದ ಸಮಾರೋಪ ಸಮಾರಂಭದ ಅಂಗವಾಗಿ ಜೂ.14ರ ರವಿವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ರಾಜ್ಯ ಕಾರ್ಯಕರ್ತರನ್ನುದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಸಂಜೆ 6 ಗಂಟೆಗೆ ನಡೆಯುವ ಕರ್ನಾಟಕ ಜನಸಂವಾದ ರ್ಯಾಲಿಯು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತಿಯಲ್ಲಿ ನಡೆಯಲಿದ್ದು, ಇದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದವರು ನುಡಿದರು.

ದೃಶ್ಯ ಮಾಧ್ಯಮಗಳ ಸಹಿತ ಬಿಜೆಪಿ ಕರ್ನಾಟಕ ಫೇಸ್ಬುಕ್ ಪೇಜ್ ಮತ್ತು ಯುಟ್ಯೂಬ್‌ನಲ್ಲಿ ರ್ಯಾಲಿ ನೇರಪ್ರಸಾರಗೊಳ್ಳಲಿದೆ. ರಾಜ್ಯದಲ್ಲಿ ಸುಮಾರು ಐದರಿಂದ 10 ಲಕ್ಷ ಮಂದಿ ರ್ಯಾಲಿಯ ನೇರಪ್ರಸಾರವನ್ನು ವೀಕ್ಷಿಸುವ ನಿರೀಕ್ಷೆ ಇದೆ. ಉಡುಪಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಐದು ಸಾವಿರ ಮಂದಿ ರ್ಯಾಲಿಯನ್ನು ವೀಕ್ಷಿಸುವ ನಿರೀಕ್ಷೆ ಇದೆ ಎಂದು ರಘುಪತಿ ಭಟ್ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕೆ, ಜಿಪಂ ಅಧ್ಯಕ್ಷ ದಿನಕರಬಾಬು, ಪದಾಧಿಕಾರಿಗಳಾದ ಗಿರೀಶ್ ಆಂಚನ್, ಮಂಜುನಾಥ ಮಣಿಪಾಲ, ರೋಶನ್ ಶೆಟ್ಟಿ, ಪ್ರಭಾಕರ ಪೂಜಾರಿ, ದಿನೇಶ್ ಅಮೀನ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News