ಉಡುಪಿ: ಆರ್ಥಿಕ ಸಂಕಷ್ಟದಲ್ಲಿದ್ದವರ ನೆರವಿಗೆ ಬ್ಲಾಕ್ ಕಾಂಗ್ರೆಸ್ ಆಗ್ರಹ
ಉಡುಪಿ, ಜೂ.12: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಎಲ್ಲಾ ವರ್ಗ ಗಳ ಜನರು ತೀರಾ ಸಂಕಷ್ಟಕ್ಕೊಳಗಾಗಿದ್ದಾರೆ. ಭವಿಷ್ಯದ ಚಿಂತೆಯಿಂದ ಆರ್ಥಿಕ ಸಂಕಷ್ಟದಿಂದ ಬಡ, ಮಧ್ಯಮ ವರ್ಗದವರು ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಸರಕಾರ ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕ ನಾಗಬಾರದು. ಆರ್ಥಿಕವಾಗಿ ಹಿಂದುಳಿದ ಟೈಲರ್ ವೃತ್ತಿಯವರು, ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ವರಿಗೆ, ದಿನಗೂಲಿ ಕಾರ್ಮಿಕರಿಗೆ ಕನಿಷ್ಟ 10,000 ರೂ.ನ್ನು ರಾಜ್ಯ ಸರಕಾರ ಅವರ ಖಾತೆಗೆ ಜಮಾ ಮಾಡುವ ಮೂಲಕ ಕಂಗಾಲಾದ ಜನರಿಗೆ ಜೀವನ ಮುಂದುವರಿಸಲು ನೈತಿಕ ಸ್ಥೈರ್ಯವನ್ನು ನೀಡಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಉಡುಪಿಯಲ್ಲಿ ಮನೆ ಬಾಡಿಗೆ ಹಾಗೂ ಜೀವನದ ದೈನಂದಿನ ಖರ್ಚು ವೆಚ್ಚವನ್ನು ನಿಭಾಯಿಸಲಾಗದೆ ಕನ್ನರ್ಪಾಡಿಯ ಟೈಲರ್ ವೃತ್ತಿಯವ ರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರ ಮೃತರ ಪತ್ನಿಗೆ ಆರ್ಥಿಕ ನೆರವು ಅಲ್ಲದೆ ಅವರ ಇಬ್ಬರ ಅವಳಿ ಜವಳಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸಿದೆ.
ಅಲ್ಲದೇ ಮಲ್ಪೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಯುವಕ ನೋರ್ವ ಆತ್ಮಹತ್ಯೆ ಮಾಡಿಕೊಂಡದ್ದನ್ನು ಕೂಡಾ ಅದು ಉಲ್ಲೇಖಿಸಿದೆ. ಇದು ಪ್ರಾರಂಭ, ಇನ್ನಷ್ಟು ಮಂದಿ ಲಾಕ್‌ಡೌನ್ ಕೊನೆಗೊಂಡರೂ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಬರದೆ ಜಿಗುಪ್ಸೆಗೊಂಡು ದಿಕ್ಕು ಕಾಣದೆ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ. ಇಂಥ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಪ್ರಜಾ ಪ್ರಭುತ್ವದಲ್ಲಿ ಚುನಾಯಿತ ಸರಕಾರಗಳ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.