×
Ad

ಕೋಯಿಕ್ಕೋಡ್ ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಧನ್ಯಾ ಸುರೇಶ್

Update: 2020-06-12 21:14 IST
Photo: thenewsminute.com

ಕೋಯಿಕ್ಕೋಡ್, ಜೂ.12: ಶ್ರೀಧನ್ಯಾ ಸುರೇಶ್ ಗುರುವಾರ ಕೋಯಿಕ್ಕೋಡ್‌ನಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ಆಗಿ ಅಧಿಕಾರ ವಹಿಸಿಕೊಂಡರು.

2019ರ ಬ್ಯಾಚ್‌ನ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್)ಅಧಿಕಾರಿಯಾಗಿರುವ ಶ್ರೀಧನ್ಯಾ ಐಎಎಸ್ ಪರೀಕ್ಷೆ ಪಾಸಾಗಿರುವ ಕೇರಳದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಸುದ್ದಿಯಾಗಿದ್ದರು.

‘‘ಕೋವಿಡ್-19 ಸಾಂಕ್ರಾಮಿಕ ರೋಗದ ವೇಳೆಯೇ ನಾನು ಅಧಿಕಾರ ವಹಿಸಿಕೊಂಡಿರುವುದು ದೊಡ್ಡ ಜವಾಬ್ದಾರಿಯಾಗಿದೆ. ಈ ಸಂಕಷ್ಟದ ಸಮಯವು ಆಡಳಿತಾತ್ಮಕ ಕ್ಷೇತ್ರವನ್ನು ಮತ್ತಷ್ಟು ಅರ್ಥ ಮಾಡಿಕೊಂಡು ಅಧ್ಯಯನ ನಡೆಸಲು ಅನುವು ಮಾಡಲಿದೆ” ಎಂದು ಕಲೆಕ್ಟರೇಟ್‌ನಲ್ಲಿ ಕೋಯಿಕ್ಕೋಡ್ ಜಿಲ್ಲಾ ಕಲೆಕ್ಟರ್ ಶ್ರೀರಾಮ್ ಸಾಂಬಶಿವ ರಾವ್ ಅವರಿಂದ ಅಧಿಕಾರ ವಹಿಸಿಕೊಳ್ಳುವ ಮೊದಲು ಸುದ್ದಿಗಾರರಿಗೆ ಶ್ರೀಧನ್ಯಾ ತಿಳಿಸಿದರು.

ತನ್ನ ನಾಗರಿಕ ಸೇವೆಯ ಪಯಣವನ್ನು ನೆನಪಿಸಿಕೊಂಡ ಶ್ರೀಧನ್ಯಾ, ‘‘2016ರಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗಿದ್ದ ಅನುಭವ ನಾಗರಿಕ ಸೇವೆಯನ್ನು ಆಯ್ದುಕೊಳ್ಳಲು ಪ್ರೇರೇಪಿಸಿತು. ಆಗಿನ ವಯನಾಡ್ ಸಬ್ ಕಲೆಕ್ಟರ್ ಆಗಿದ್ದ ಈಗಿನ ಕೋಯಿಕ್ಕೋಡ್ ಕಲೆಕ್ಟರ್ ಶ್ರೀರಾಮ್ ಸಾಂಬಶಿವ ರಾವ್‌ರಿಂದ ನಾನು ಭವ್ಯ ಸ್ವಾಗತ ಪಡೆದಿದ್ದೆ. ಇದು ನನ್ನ ಕನಸಿಗೆ ರೆಕ್ಕೆ ಮೂಡಿಸಿತು. ಇದೀಗ ಅವರೊಂದಿಗೆ ಕೆಲಸ ಮಾಡಲು ತುಂಬಾ ಸಂತೋಷವಾಗುತ್ತಿದೆ. ಕೋಯಿಕ್ಕೋಡ್ ನನಗೆ ಎರಡನೇ ಮನೆಯಿದ್ದಂತೆ. ನಾನು ಇಲ್ಲಿಯೇ ಶಿಕ್ಷಣ ಪಡೆದಿದ್ದೆ’’ ಎಂದರು.

ಅಧಿಕಾರಿಯಾಗಿ ತನ್ನ 8 ವರ್ಷಗಳ ವೃತ್ತಿಜೀವನದಲ್ಲಿ ಶ್ರೀಧನ್ಯಾ ಅವರ ವಿಜಯ ಮರೆಯಲಾಗದ ಕ್ಷಣ ಎಂದು ಇದೇ ವೇಳೆ ಕಲೆಕ್ಟರ್ ಶ್ರೀರಾಮ್ ಸಾಂಬಶಿವ ರಾವ್ ಹೇಳಿದ್ದಾರೆ.

ಕೇರಳದ ವಯನಾಡ್ ಜಿಲ್ಲೆಯವರಾದ ಶ್ರೀಧನ್ಯಾ ವಯನಾಡ್‌ನ ಥರಿಯೊಡ್‌ನ ನಿರ್ಮಲಾ ಹೈಸ್ಕೂಲ್‌ನಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಕೋಯಿಕ್ಕೋಡ್‌ನ ದೇವಗಿರಿ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದರು. ಆ ಬಳಿಕ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News