ಇಎಸ್‌ಐ ಹಗರಣ: ಆಂಧ್ರದ ಮಾಜಿ ಸಚಿವ ಸಹಿತ ಆರು ಜನರ ಬಂಧನ

Update: 2020-06-12 16:46 GMT

ಅಮರಾವತಿ, ಜೂ.12: ಈ ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿರುವ 150 ಕೋಟಿ ರೂ. ಮೊತ್ತದ ಇಎಸ್‌ಐ ಔಷಧ ಖರೀದಿ ಹಗರಣದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ತೆಲುಗುದೇಶಂ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಕೆ ಅಚ್ಚನ್ನಾಯುಡು ಹಾಗೂ ಇತರ ಆರು ಜನರನ್ನು ಬಂಧಿಸಿರುವುದಾಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಹೇಳಿದ್ದಾರೆ.

ಶ್ರೀಕಾಕುಲಂ ಜಿಲ್ಲೆಯಲ್ಲಿರುವ ನಿವಾಸದಿಂದ ನಾಯುಡುರನ್ನು ಬಂಧಿಸಿದ್ದರೆ, ಇಎಸ್‌ಐಯ ಮಾಜಿ ನಿರ್ದೇಶಕರಾದ ಸಿ ರವಿ ಕುಮಾರ್ ಮತ್ತು ಜಿ ವಿಜಯ್ ಕುಮಾರ್‌ರನ್ನು ತಿರುಪತಿ ಮತ್ತು ರಾಜಮಹೇಂದ್ರವರಮ್‌ನಿಂದ ಬಂಧಿಸಲಾಗಿದೆ. ಇಎಸ್‌ಐನ ಜಂಟಿ ನಿರ್ದೇಶಕ ಜನಾರ್ದನ್ ಮತ್ತು ಅಧೀಕ್ಷಕ ಚಕ್ರವರ್ತಿ, ಹಿರಿಯ ಸಹಾಯಕನನ್ನು ವಿಜಯವಾಡದಲ್ಲಿ ಬಂಧಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ ಜಂಟಿ ನಿರ್ದೇಶಕ ರವಿ ಕುಮಾರ್ ಹೇಳಿದ್ದಾರೆ. ಅಚ್ಚನ್ನಾಯುಡು ಟಿಡಿಪಿ ನೇತೃತ್ವದ ಈ ಹಿಂದಿನ ಸರಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು. 2014ರಿಂದ 2019ರ ಅವಧಿಯಲ್ಲಿ ಇಎಸ್‌ಐ ಔಷಧಿ ಖರೀದಿಯ ಬಗ್ಗೆ ವಿಜಿಲೆನ್ಸ್ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಭಾರೀ ಅಕ್ರಮ ಮತ್ತು ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ.

 ಔಷಧಿ, ಮೆಡಿಕಲ್ ಕಿಟ್‌ಗಳು, ಪೀಠೋಪಕರಣ ಮತ್ತಿತರ ವಸ್ತುಗಳ ಖರೀದಿಯಲ್ಲಿ 150 ಕೋಟಿ ಮೊತ್ತದ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ ಎಂದು ಎಸಿಬಿ ಜಂಟಿ ನಿರ್ದೇಶಕರು ಹೇಳಿದ್ದಾರೆ. ಬಂಧನವನ್ನು ಖಂಡಿಸಿರುವ ಟಿಡಿಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಇದು ಹಿಂದುಳಿದ ವರ್ಗದವರ ಮೇಲೆ ಸರಕಾರ ನಡೆಸಿರುವ ದಾಳಿಯಾಗಿದೆ ಎಂದಿದ್ದಾರೆ. ಹಿಂದುಳಿದ ವರ್ಗದ ನಾಯಕ ಅಚ್ಚನ್ನಾಯುಡು ಆಂಧ್ರಪ್ರದೇಶದ ಈಗಿನ ಸರಕಾರದ ತಪ್ಪು ಕಾರ್ಯಗಳನ್ನು ಬಯಲಿಗೆಳೆಯುವ ಕಾರ್ಯದಲ್ಲಿ ತೊಡಗಿದ್ದರು. ಇದನ್ನು ಸಹಿಸದ ಸರಕಾರ ಅವರನ್ನು ಬಂಧಿಸಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News