×
Ad

ವಿಮಾನ ಟಿಕೆಟ್‌ನ ಪೂರ್ಣ ಹಣ ಮರುಪಾವತಿ; ಉತ್ತರಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್

Update: 2020-06-12 22:19 IST

ಹೊಸದಿಲ್ಲಿ, ಜೂ.12: ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಕಾಯ್ದಿರಿಸಿದ ವಿಮಾನ ಪ್ರಯಾಣದ ಟಿಕೆಟ್‌ನ ಪೂರ್ಣ ಹಣದ ಮರುಪಾವತಿ ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ 3 ವಾರದೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಟಿಕೆಟ್‌ನ ಹಣವನ್ನು ಪ್ರಯಾಣಿಕರಿಗೆ ಜಮೆಯಾದಂತೆ ಸರಿಹೊಂದಿಸಿ, ಮುಂದಿನ 2 ವರ್ಷ ಆ ಪ್ರಯಾಣಿಕರ ವಿಮಾನ ಪ್ರಯಾಣದ ಸಂದರ್ಭ ಇದನ್ನು ಬಳಸಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಸಲಹೆ ನೀಡಿದೆ. ಎಲ್ಲಾ ವಿಮಾನಯಾನ ಸಂಸ್ಥೆಗಳ ಅಹವಾಲನ್ನು ಆಲಿಸಿ, ವಿಷಯದ ಬಗ್ಗೆ ಚರ್ಚೆ ನಡೆಸಿ ಸೂಕ್ತ ವಿಧಾನ ರೂಪಿಸುವಂತೆ ನ್ಯಾಯಾಲಯ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತಿಳಿಸಿದೆ.

ಪ್ರವಾಸೀ ಲೀಗಲ್ ಸೆಲ್ ಎಂಬ ಸ್ವಯಂಸೇವಾ ಸಂಘಟನೆ ಅರ್ಜಿ ಸಲ್ಲಿಸಿದೆ. ರದ್ದುಗೊಳಿಸಿದ ಟಿಕೆಟ್‌ನ ಪೂರ್ಣ ಹಣ ಮರುಪಾವತಿಸುವ ಬದಲು ವಿಮಾನಯಾನ ಸಂಸ್ಥೆಗಳು ಒಂದು ವರ್ಷ ವಾಯಿದೆಯ ಕ್ರೆಡಿಟ್ ನೋಟ್ ನೀಡುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅರ್ಜಿಯ ವಿಚಾರಣೆ ಸಂದರ್ಭ ವಾದ ಮಂಡಿಸಿದ ಸ್ಪೈಸ್ ಜೆಟ್ ಪರ ವಕೀಲ ಹರೀಶ್ ಸಾಲ್ವೆ, ಲಾಕ್‌ಡೌನ್ ಕಾರಣ ವಿಮಾನಯಾನ ಸಂಸ್ಥೆಗಳಿಗೆ ಜಾಗತಿಕವಾಗಿ 60 ಬಿಲಿಯನ್ ಡಾಲರ್ ಮೊತ್ತಕ್ಕಿಂತಲೂ ಹೆಚ್ಚಿನ ನಷ್ಟವಾಗಿದೆ. ವಿಶ್ವದಲ್ಲಿ ಎಲ್ಲಿಯೂ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು ಪೂರ್ತಿ ಮರುಪಾವತಿಸಿಲ್ಲ. ವಿಮಾನ ಯಾನ ಸಂಸ್ಥೆಗಳು ನಾಗರಿಕ ವಿಮಾನಯಾನ ಸಚಿವಾಲಯದ ಜೊತೆ ಮಾತುಕತೆ ನಡೆಸಿ ಇದಕ್ಕೆ ಒಂದು ಪರಿಹಾರ ರೂಪಿಸುತ್ತವೆ ಎಂದರು.

ಪೂರ್ಣ ಹಣ ಮರುಪಾವತಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News