ಶಿಕ್ಷಕರಿಗೆ ವೇತನಕ್ಕೆ ವಿಶೇಷಾನುದಾನ ಒದಗಿಸಿ: ಆಂಗ್ಲ ಮಾಧ್ಯಮ ಶಾಲಾ ಒಕ್ಕೂಟದಿಂದ ಸರಕಾರಕ್ಕೆ ಮನವಿ
ಮಂಗಳೂರು, ಜೂ.13: ಕಳೆದ ಮಾರ್ಚ್‌ನಲ್ಲಿ ಪರೀಕ್ಷೆ ನಡೆಸದೆ ಇರುವುದರಿಂದ ವಿದ್ಯಾರ್ಥಿಗಳ ಪೋಷಕರಿಂದ ಬಾಕಿ ಶುಲ್ಕ ಪಾವತಿಯಾಗಿಲ್ಲ. ಇದರಿಂದ ಶಿಕ್ಷಕರಿಗೆ, ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದೆ ಅವರ ಪರಿಸ್ಥಿತಿ ಅಯೋಮಯವಾಗಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲಾ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಒಕ್ಕೂಟದ ಅಧ್ಯಕ್ಷರಾದ ವೈ.ಮುಹಮ್ಮದ್ ಬ್ಯಾರಿ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವವರು ಅಲ್ಲಿ ದುಡಿಯುವ ಶಿಕ್ಷಕರು ಹಾಗೂ ಸಿಬ್ಬಂದಿ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದರು.
ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮಾಂತರ ಪ್ರದೇಶಗಳಲ್ಲೂ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಕೆಲ ಉತ್ಸಾಹಿ ವ್ಯಕ್ತಿಗಳು ಆಂಗ್ಲ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಿದ್ದಾರೆ. ಹಲವಾರು ಕಷ್ಟಗಳ ಹೊರತಾಗಿಯೂ ಶಾಲೆಯನ್ನು ನಡೆಸುತ್ತಿದ್ದು, ಪ್ರತಿಭಾವಂತ ಸುಶಿಕ್ಷಿತರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಇದೀಗ ಹಲವು ಶಾಲೆಗಳಿಗೆ ಕಳೆದ ಎರಡು ವರ್ಷಗಳಿಂದ ಆರ್‌ಟಿಇ ಅನುದಾನ ಪಾವತಿಯಾಗಿಲ್ಲ. ದ.ಕ. ಜಿಲ್ಲೆಯಲ್ಲಿಯೇ ಸುಮಾರು ಆರ್‌ಟಿಇಯಡಿ ವಿವಿಧ ಶಾಲೆಗಳಿಗೆ 8 ಕೋಟಿ ರೂ. ಪಾವತಿಯಾಗಬೇಕಿದೆ ಎಂದು ಅವರು ತಿಳಿಸಿದರು.
ಆರನೇ ವೇತನ ಆಯೋಗದಲ್ಲಿ ನಮೂದಿಸಿದ ವೇತನವನ್ನು ಶಿಕ್ಷಕರು ಹಾಗೂ ಸಿಬ್ಬಂದಿಗೆ ನೀಡಬೇಕಾದಲ್ಲಿ ಕನಿಷ್ಠ ಪ್ರತಿಯೊಂದು ವಿದ್ಯಾರ್ಥಿಯಿಂದ 60,000 ರೂ.ನಿಂದ 70,000 ರೂ. ಶುಲ್ಕ ಪಡೆಯಬೇಕು. ಈ ಬಗ್ಗೆ ಸರಕಾರ ವಿಮರ್ಶೆ ಮಾಡಬೇಕು. ಶಿಕ್ಷಕ ವರ್ಗದವರಿಗೆ ವೇತನ ನೀಡಲು ಸರಕಾರದಿಂದ ಅನುದಾನ ನೀಡಬೇಕು. ಈಗಾಗಲೇ ಲಾಕ್‌ಡೌನ್‌ನಿಂದ ವೇತನ ಪಾವತಿಗೆ ಸರಕಾರ ವಿಶೇಷಾನುದಾನ ಒದಗಿಸಬೇಕು. ಬಜೆಟ್ ಶಾಲೆಗಳಿಗೂ ಹೈಫೈ ಶಾಲೆಗಳಿಗೂ ಇರುವ ವ್ಯತ್ಯಾಸ ಗಮನಿಸಿ ಅನಗತ್ಯ ಟೀಕೆ ಮಾಡುವವುದು ಸರಿಯಲ್ಲ. ತಮ್ಮ ಬೇಡಿಕೆಗಳ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ, ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ, ಸದಸ್ಯರಾದ ಬಿ.ಎ. ನಝೀರ್, ಮೂಸಬ್ಬ ಪಿ. ಬ್ಯಾರಿ ಉಪಸ್ಥಿತರಿದ್ದರು.
ಅನುದಾನ ನೀಡಿ ಇಲ್ಲವೇ ಬಡ್ಡಿರಹಿತ ಸಾಲ ನೀಡಿ
ಸರಕಾರ ಅಥವಾ ಪೋಷಕರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಂಗ್ಲ ಮಾಧ್ಯಮ ಶಾಲೆಗಳು ಸಿದ್ಧವಿವೆ. ಆದರೆ ಸಾವಿರಾರು ಸಂಖ್ಯೆಯಲ್ಲಿರುವ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗಕ್ಕೆ ವೇತನ ನೀಡುವ ಮೂಲಕ ಅವರ ಜೀವನಕ್ಕೆ ದಾರಿ ತೋರಿಸಬೇಕಾಗಿದೆ. ಆನ್‌ಲೈನ್ ಶಿಕ್ಷಣ ರದ್ದತಿ, ಶಾಲೆಗಳನ್ನು ನಿಗದಿತ ಅವಧಿಗೆ ಮುಚ್ಚುವ ನಿರ್ಧಾರಕ್ಕೆ ಅಭ್ಯಂತರವಿಲ್ಲ. ಆದರೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಭವಿಷ್ಯದ ಬಗ್ಗೆಯೂ ಆಲೋಚಿಸಬೇಕು. ಜತೆಗೆ ಮಕ್ಕಳ ಆರೋಗ್ಯದ ಬಗ್ಗೆಯೂ ನಮಗೆ ಕಾಳಜಿ ಇದೆ. ಈ ನಿಟ್ಟಿನಲ್ಲಿ ಸರಕಾರ ಆಂಗ್ಲ ಮಾಧ್ಯಮ ಶಾಲೆಗಳಿಗೆ ವಿಶೇಷ ಅನುದಾನ ನೀಡಬೇಕು. ಇಲ್ಲವಾದಲ್ಲಿ ಬಡ್ಡಿರಹಿತ ಸಾಲವನ್ನು ಒದಗಿಸಿದರೆ, 10 ವರ್ಷಗಳಲ್ಲಿ ಅದನ್ನು ಮರು ಪಾವತಿ ಮಾಡುತ್ತೇವೆ. ಅದು ಬಿಟ್ಟು ವಿನಾ ಕಾರಣ ಆಂಗ್ಲ ಮಾಧ್ಯಮ ಶಾಲೆಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ.
-ಸವಣೂರು ಸೀತಾರಾಮ ರೈ,
ಕೋಶಾಧಿಕಾರಿ, ದ.ಕ.- ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲಾ ಒಕ್ಕೂಟ