ಲಾಕ್‌ಡೌನ್‌ನಿಂದ ಜನರಿಗೆ ಉಂಟಾಗಿರುವ ಸಂಕಷ್ಟ ಪರಿಹರಿಸಲು ಆಗ್ರಹ: ಜೂ.16ರಂದು ಸಿಪಿಎಂನಿಂದ ಧರಣಿ
ಮಂಗಳೂರು, ಜೂ.13: ಕೊರೋನ ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರಿಗೆ ಉಂಟಾಗಿರುವ ಸಂಕಷ್ಟಗಳನ್ನು ಪರಿಹರಿಸಲು ಕ್ರಮ ಜರುಗಿಸಲು ಒತ್ತಾಯಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಿಪಿಎಂನಿಂದ ಜೂ.16ರಂದು ಧರಣಿ ಆಯೋಜಿಸಲಾಗಿದೆ.
ದ.ಕ. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ್ತು ಮಂಗಳೂರು ತಾಲೂಕಿನ ವಲಯ ಕೇಂದ್ರಗಳಲ್ಲಿ ಈ ಪ್ರತಿಭಟನೆ ನಡೆಯಲಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಲಾಕ್‌ಡೌನ್ ಸಂದರ್ಭ ಜಿಲ್ಲೆಯ ಸಂಸದರು ಹಾಗೂ ಶಾಸಕರು ಸರ್ವಾಧಿಕಾರಿಯಾಗಿ ವರ್ತಿಸಿದ್ದು, ಜಿಲ್ಲಾಡಳಿತವನ್ನು ಕಡೆಗಣಿಸಿದೆ. ಇದರಿಂದಾಗಿ ಕಾರ್ಮಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ ಎಂದು ವಸಂತ ಆಚಾರಿ ದೂರಿದ್ದಾರೆ.
ಕೇಂದ್ರ ಸರಕಾರ ಪೂರ್ವ ತಯಾರಿ ಇಲ್ಲದೆ ಲಾಕ್‌ಡೌನ್ ಘೋಷಿಸಿರುವುದರಿಂದ ವಲಸೆ ಕಾರ್ಮಿಕರು ಆದಾಯವಿಲ್ಲದೆ ಬೀದಿಪಾಲಾಗಿದ್ದಾರೆ. ಭಾರತ ಸರಕಾರ ಕೊರೋನವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಲಾಕ್‌ಡೌನ್‌ನ ದುಷ್ಪರಿಣಾಮಗಳನ್ನು ಎದುರಿಸಲು ಕ್ರಮ ಜರುಗಿಸಿಲ್ಲ. ಬದಲಾಗಿ ಕಾರ್ಮಿಕರು, ನೌಕರರು ಉದ್ಯೋಗ ಕಡಿತ, ವೇತನ ಕಡಿತ, ಕೆಲಸದ ಅವಧಿ ಹೆಚ್ಚಳದಂತಹ ಕ್ರಮಗಳಿಗೆ ಬಲಿಯಾಗುತ್ತಿದ್ದಾರೆ. ನೊಂದ ಕುಟುಂಬಗಳಿಗೆ ಪರಿಹಾರ ನೀಡಬೇಕಾದ ಕೇಂದ್ರ ಸರಕಾರ ಲಾಕ್‌ಡೌನ್ ಹಿಂದೆಗೆದು ಕೊರೋನ ತಡೆಗಟ್ಟುವ ಜವಾಬ್ದಾರಿಯನ್ನು ರಾಜ್ಯ ಸರಕಾರಕ್ಕೆ ಹೊರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೇರಳ ರಾಜ್ಯ ವಿಶ್ವಕ್ಕೆ ಮಾದರಿಯಾಗಿದೆ. ಯೋಜನಾಬದ್ಧವಾಗಿ ಅಲ್ಲಿನ ಸರಕಾರ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೇಂದ್ರ ಸರಕಾರ ಇದನ್ನು ಪರಿಗಣಿಸುತ್ತಿಲ್ಲ. ಆ ಕಾರಣ ಕೊರೋನ ನಿಯಂತ್ರಣದಲ್ಲಿ ಕೇಂದ್ರದ ವೈಫಲ್ಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾಕ್‌ಡೌನ್‌ನ ಎಲ್ಲನಿಯಮಗಳನ್ನು ಪಾಲಿಸಿಕೊಂಡು ಧರಣಿ ನಡೆಸಲಾಗುವುದು ಎಂದರು.
ಆದಾಯ ತೆರಿಗೆ ತೆರುವ ಮಿತಿಗಳ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ 7,500 ರೂ.ನಂತೆ ಆರು ತಿಂಗಳು ನಗದು ವರ್ಗಾವಣೆ, ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿಯಂತೆ ಆರು ತಿಂಗಳು ಉಚಿತ ಆಹಾರ ಧಾನ್ಯ ವಿತರಣೆ, ಉದ್ಯೋಗ ಖಾತ್ರಿಯಡಿ ಹೆಚ್ಚಿಸಿದ ಕೂಲಿಯೊಂದಿಗೆ ಕನಿಷ್ಠ ವರ್ಷದಲ್ಲಿ 200 ದಿನಗಳ ಉದ್ಯೋಗ, ನಗರದ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಣೆ, ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ತೆ, ರಾಷ್ಟ್ರೀಯ ಆಸ್ತಿ ಲೂಟಿ ತಡೆದು, ಸಾರ್ವಜನಿಕ ವಲಯದ ಖಾಸಗೀಕರಣ ಮತ್ತು ಕಾರ್ಮಿಕ ಕಾನೂನು ರದ್ಧತಿಯನ್ನು ನಿಲ್ಲಿಸಬೇಕು. ಕರ್ನಾಟಕದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್‌ಗಳು, ಅಗತ್ಯ ಔಷಧಿಗಳ ಕೊರತೆ ಇದ್ದು ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಪೂರೈಸಬೇಕು ಎಂಬ ಬೇಡಿಕೆಗಳಿಗೆ ಧರಣಿಯಲ್ಲಿ ಆಗ್ರಹಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.