×
Ad

ನೀರಿನ ಬಿಲ್ ಅವ್ಯವಹಾರಕ್ಕೆ ಸಂಬಂಧಿಸಿ ಆರೋಪಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಸೂಚನೆ

Update: 2020-06-13 13:45 IST

ಉಪ್ಪಿನಂಗಡಿ, ಜೂ.13: 34 ನೆಕ್ಕಿಲಾಡಿಯ ನೀರಿನ ಬಿಲ್ ಅವ್ಯವಹಾರಕ್ಕೆ ಸಂಬಂಧಿಸಿ ಅವ್ಯವಹಾರ ನಡೆಸಿದ ಸಿಬ್ಬಂದಿಯ ವಿರುದ್ಧ ವಾರದೊಳಗೆ ಕ್ರಿಮಿನಲ್ ಕೇಸು ದಾಖಲಿಸುವಂತೆ ಹಾಗೂ ಗ್ರಾಪಂಗೆ ನಷ್ಟವಾದ ಮೊತ್ತವನ್ನು ಅವರಿಂದ ಭರಿಸಲು ಅವರಿಗೆ ನೋಟಿಸ್ ಜಾರಿ ಮಾಡುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸೂಚಿಸಿದ್ದಾರೆ.

34 ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷೆ ರತಿ ಎಸ್. ನಾಯ್ಕ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಗೆ ದಿಢೀರ್ ಭೇಟಿ ನೀಡಿದ ಅವರು, ನೀರಿನ ಬಿಲ್‌ನಲ್ಲುಂಟಾದ ಅವ್ಯವಹಾರದ ಮಾಹಿತಿ ಪಡೆದರು.

ಈ ಬಗ್ಗೆ ಮಾಹಿತಿ ನೀಡಿದ 34 ನೆಕ್ಕಿಲಾಡಿ ಗ್ರಾಪಂ ಪಿಡಿಒ ಜಯಪ್ರಕಾಶ್, ಗ್ರಾಪಂನಲ್ಲಿ ನೀರಿನ ಬಿಲ್ ವಸೂಲಿಗೆ ಬೇಡಿಕೆ ಹಾಗೂ ವಸೂಲಾತಿಯ ಎರಡು ರಶೀದಿಗಳಿವೆ. ಬೇಡಿಕೆಯ ರಶೀದಿ ಬಿಳಿ ಬಣ್ಣದ್ದಾಗಿದ್ದರೆ, ವಸೂಲಾತಿಯ ರಶೀದಿ ಕೆಂಪು ಬಣ್ಣದ್ದಾಗಿದೆ. ಇಲ್ಲಿನ ನೀರಿನ ಕರ ವಸೂಲಿಗ ಸಿಬ್ಬಂದಿಯು ಕುಡಿಯುವ ನೀರಿನ ಬಳಕೆದಾರರಿಗೆ ಬೇಡಿಕೆಯ ರಶೀದಿ ನೀಡಿ ಹಣ ಪಡೆದಿದ್ದು, ಆದರೆ ಇಲ್ಲಿ ವಸೂಲಾತಿಯ ರಶೀದಿಯಲ್ಲಿ ಕಡಿಮೆ ಮೊತ್ತವನ್ನು ಬರೆದಿದ್ದಾರೆ ಎಂಬ ಆರೋಪ ಬಳಕೆದಾರರಿಂದ ಕೇಳಿ ಬಂದಿದೆ. ವಸೂಲಾತಿಯ ಮೊತ್ತ ಮಾತ್ರ ಬ್ಯಾಂಕ್‌ಗೆ ಜಮೆಯಾಗಿದೆ. ಕುಡಿಯುವ ನೀರಿನ ಬಳಕೆದಾರರು ಆರೋಪಿಸುವಂತೆ ಉದಾಹರಣೆಗೆ ಓರ್ವ ಕುಡಿಯುವ ನೀರಿನ ಬಳಕೆದಾರ 500 ರೂ. ಪಾವತಿಸಿದರೆ ಅವರಿಗೆ 500 ರೂ. ಎಂದು ನಮೂದಿಸಿ ಬಿಳಿ ಬಣ್ಣದ ಬೇಡಿಕೆ ರಶೀದಿ ನೀಡಲಾಗಿದೆ. ಆದರೆ ಕೆಂಪು ಬಣ್ಣದ ವಸೂಲಾತಿಯ ರಶೀದಿಯಲ್ಲಿ 100 ರೂ. ಎಂದು ಮಾತ್ರ ಬರೆಯಲಾಗಿದೆ. ಇದರಿಂದ ಬಳಕೆದಾರ 500 ರೂ. ಪಾವತಿಸಿದರೂ ಗ್ರಾಪಂಗೆ ಬಂದಿರುವುದು 100 ರೂ. ಮಾತ್ರ. ಉಳಿದ 400 ರೂ. ಬಾಕಿ ಎಂದಾಗುತ್ತದೆ. ಈ ರೀತಿ ಅವ್ಯವಹಾರ ನಡೆಸಿದ ಬಗ್ಗೆ ಕೆಲವರು ದಾಖಲೆ ಸಹಿತ ಗ್ರಾ.ಪಂ.ಗೆ ದೂರು ನೀಡಿದ್ದಾರೆ ಎಂದರು.

ನೀರಿನ ಬಿಲ್ ವಸೂಲಾತಿಯಲ್ಲಿ ಈ ರೀತಿಯ ವಂಚನೆ ನಡೆದಿರುವಾಗ ಅವರ ಮೇಲೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದೇಕೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯನ್ನು ಇಒ ತರಾಟೆಗೈದರು. ಅವ್ಯವಹಾರದ ದಾಖಲೆಗಳನ್ನು ಕ್ರೋಡೀಕರಿಸಿಕೊಂಡು ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಕೇಸ್ ಮಾಡಿ. ವಾರದೊಳಗೆ ಈ ಎಲ್ಲ ಕೆಲಸಗಳು ಆಗಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಅನಧಿಕೃತ ಕುಡಿಯುವ ನೀರಿನ ಸಂಪರ್ಕ, ಚರಂಡಿ ನಿರ್ವಹಣೆ ಹಾಗೂ ದಾರಿ ದೀಪ ಅಳವಡಿಕೆಯ ಕಾಮಗಾರಿಗಳ ಚರ್ಚೆ ನಡೆಯಿತು.

ಸಭೆಯಲ್ಲಿ ಪ್ರಭಾರ ಕಾರ್ಯದರ್ಶಿ ಚಂದ್ರಾವತಿ, ಗ್ರಾಪಂ ಉಪಾಧ್ಯಕ್ಷ ಅಸ್ಗರ್ ಅಲಿ, ಸದಸ್ಯರಾದ ಅನಿ ಮಿನೇಜಸ್, ಸತ್ಯವತಿ ಪೂಂಜಾ, ಎನ್. ಶೇಕಬ್ಬ, ಪ್ರಶಾಂತ್, ಮೈಕಲ್ ವೇಗಸ್, ಬಾಬು ನಾಯ್ಕ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News