ಉದ್ಯೋಗ ಕಳೆದುಕೊಂಡ ಶಿಕ್ಷಕ ಈಗ ಬಾಳೆಹಣ್ಣು ಮಾರಾಟಗಾರ

Update: 2020-06-13 10:28 GMT
ಚಿತ್ರ ಕೃಪೆ: thenewsminute.com

ಹೈದರಾಬಾದ್: ತೆಲಂಗಾಣದ ನೆಲ್ಲೂರಿನ ನಾರಾಯಣ ಶಾಲೆಯಲ್ಲಿ ಕಳೆದ 15 ವರ್ಷ ತೆಲುಗು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ವೆಂಕಟಸುಬ್ಬಯ್ಯ ಕಳೆದ ಮೂರು ವಾರಗಳಿಂದ ತಳ್ಳುಗಾಡಿಯಲ್ಲಿ ಬಾಳೆಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಲಾಕ್ ಡೌನ್ ಸಂದರ್ಭ ಅವರು ತಮ್ಮ  ಉದ್ಯೋಗ ಕಳೆದುಕೊಂಡಿರುವುದು. ಅವರು ಉದ್ಯೋಗ ಕಳೆದುಕೊಳ್ಳಲು ಕಾರಣ ಅಸಮಾಧಾನಕರ ಕಾರ್ಯನಿರ್ವಹಣೆ. ಹಾಗೆಂದು ಅವರು ಚೆನ್ನಾಗಿ ಪಾಠ ನಿರ್ವಹಿಸುತ್ತಿರಲಿಲ್ಲವೆಂದು ಅರ್ಥವಲ್ಲ. ಅವರು ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳನ್ನು ದಾಖಲಿಸಲು ಸಹಾಯ ಮಾಡಲು ವಿಫಲರಾಗಿದ್ದಕ್ಕೆ ಆಡಳಿತ ಅವರ ಸಹಿತ ಐದು ಮಂದಿ ಇತರ ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ವರದಿಯಾಗಿದೆ.

ತಮ್ಮ ಶಿಕ್ಷಕ ಬಾಳೆಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆಂದು ತಿಳಿದ  ಅವರ ಸುಮಾರು 150 ಹಳೆವಿದ್ಯಾರ್ಥಿಗಳು ಅವರಿಗಾಗಿ ರೂ. 86,300 ಸಂಗ್ರಹಿಸಿದ್ದಾರೆ.

ಬಾಳೆಹಣ್ಣು ಮಾರಾಟ ಮಾಡುವುದು ಒಂದು ತಾತ್ಕಾಲಿಕ ಕೆಲಸ. ಮತ್ತೆ ಶಿಕ್ಷಕ ಕೆಲಸ ದೊರಕಿದರೆ, ಕಡಿಮೆ ಸಂಬಳವಾದರೂ ಚಿಂತೆಯಿಲ್ಲ ಹೋಗುತ್ತೇನೆ ಎಂದು ಅವರು ಹೇಳುತ್ತಾರೆ. ತಾವೀಗಾಗಲೇ ಬಹಳಷ್ಟು ಸಾಲದಲ್ಲಿದ್ದು ತಮ್ಮ ಅನಾರೋಗ್ಯದಿಂದಿರುವ ಪುತ್ರನ ಚಿಕಿತ್ಸೆಗೂ ಹಣ ಬೇಕಿದೆ ಎಂದು ಅವರು ವಿವರಿಸುತ್ತಾರೆ.

ತಮ್ಮ ಮಾಜಿ ವಿದ್ಯಾರ್ಥಿಯೊಬ್ಬನ ತಂದೆ ಅವರ ತೋಟದಲ್ಲಿ ಬೆಳೆದ ಬಾಳೆಹಣ್ಣುಗಳನ್ನು ಮಾರಾಟ ಮಾಡಲು ನೀಡಿದ್ದಾರೆ ಎಂದು ಹೇಳುವ ವೆಂಕಟಸುಬ್ಬಯ್ಯ ಅವರು ತೆಲುಗು ಹಾಗೂ ಸಾರ್ವಜನಿಕ ಆಡಳಿತದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ  ಬಿ.ಎಡ್  ಪದವಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News