×
Ad

"ಸುಳ್ಳು ಹೇಳುವುದನ್ನು ನಿಲ್ಲಿಸದಿದ್ದರೆ ನಿನ್ನನ್ನು ಫ್ಯಾನ್ ಗೆ ನೇತಾಡಿಸುತ್ತೇನೆ"

Update: 2020-06-13 16:20 IST
ಸಂಬಿತ್ ಪಾತ್ರಾ, ನಿಶಾಂತ್ ವರ್ಮಾ

ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರಿಗೆ ರಾಜಕೀಯ ವಿಶ್ಲೇಷಕ ನಿಶಾಂತ್ ವರ್ಮಾ ಅವರು "ಫ್ಯಾನ್ ನಿಂದ ನೇತಾಡಿಸಿ ಹೊಡೆಯುತ್ತೇನೆ" ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ. 

ರಿಪಬ್ಲಿಕ್ ಟಿವಿಯಲ್ಲಿ ಅರ್ನಬ್ ಗೋಸ್ವಾಮಿ ನಡೆಸುತ್ತಿದ್ದ ಚರ್ಚೆಯಲ್ಲಿ ಸಂಬಿತ್ ಪಾತ್ರ ಹಾಗು ನಿಶಾಂತ್ ವರ್ಮಾ ಭಾಗವಹಿಸಿದ್ದರು. ಗುಜರಾತ್ ಹಾಗು ಪಶ್ಚಿಮ ಬಂಗಾಳದ ಕುರಿತು ವಿದೇಶಿ ಲೇಖಕರೊಬ್ಬರ ಮಾತನ್ನು ಉಲ್ಲೇಖಿಸಿ ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ ಮಾತು ಹಾಗು ಅದಕ್ಕೆ ಗುಜರಾತ್ ಸಿಎಂ ವಿಜಯ್ ರೂಪಾಣಿ ನೀಡಿದ ತಿರುಗೇಟಿನ ಬಗ್ಗೆ ಚರ್ಚೆ ನಡೆಯುತ್ತಿತ್ತು.

ಬಿಸಿಬಿಸಿ ಚರ್ಚೆಯ ನಡುವೆ ಒಮ್ಮೆ ಸಂಬಿತ್ ಪಾತ್ರ ಅವರು ನಿಶಾಂತ್ ವರ್ಮಾ ಅವರಲ್ಲಿ "ನಿಮಗೆ ಗುಜರಾತಿಗಳ ಮೇಲೆ ಇಷ್ಟು ದ್ವೇಷ ಯಾಕೆ?" ಎಂದು ಕೇಳಿದರು. ಇದಕ್ಕೆ ಕೆರಳಿದ ನಿಶಾಂತ್ ವರ್ಮಾ "ಸುಳ್ಳು ಹೇಳುವುದನ್ನು ನಿಲ್ಲಿಸು, ಇಲ್ಲದಿದ್ದರೆ ನಿನ್ನನ್ನು ಫ್ಯಾನ್ ಗೆ ಉಲ್ಟಾ ನೇತಾಡಿಸುತ್ತೇನೆ" ಎಂದು ತಿರುಗೇಟು ನೀಡಿದರು. ಇದರಿಂದ ತಬ್ಬಿಬ್ಬುಗೊಂಡ ಸಂಬಿತ್ "ಕೈ ಎತ್ತಿ ನೋಡು" ಎಂದು ಪ್ರತಿಕ್ರಿಯಿಸಿದರು. ಇಬ್ಬರೂ ಒಬ್ಬರಿಗೊಬ್ಬರು ಬೈಗುಳ ನೀಡುತ್ತಲೇ ಮುಂದುವರಿದರು. "ಇಂತಹ ಗೂಂಡಾ, ಕಸಾಯಿಯನ್ನು ಡಿಬೇಟ್ ನಿಂದ ಹೊರಗೆ ಹಾಕಿ" ಎಂದು ಸಂಬಿತ್ ಹೇಳಿದರೆ "ಸುಮ್ಮನಿರು,  ಇಲ್ಲದಿದ್ದರೆ ಫ್ಯಾನ್ ಗೆ ಉಲ್ಟಾ ನೇತಾಡಿಸಿ ತಿರುಗಿಸುತ್ತೇನೆ" ಎಂದು ನಿಶಾಂತ್ ವರ್ಮಾ ಬೆದರಿಕೆಯ ಧ್ವನಿಯಲ್ಲಿ ಹೇಳಿದರು. 

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿರುವ ಸಂಬಿತ್ ಪಾತ್ರ "ಟಿವಿಯಲ್ಲಿ ಜೀವ ಬೆದರಿಕೆ ಹಾಕಲಾಗುತ್ತಿದೆ, ಇದಕ್ಕೆ ಕಾಂಗ್ರೆಸ್ ಬೆಂಬಲವಿದೆ, ಇದೇ ಇವರ ಸಹಿಷ್ಣುತೆ, ಇದೇ ಇವರ ಅಭಿವ್ಯಕ್ತಿ ಸ್ವಾತಂತ್ರ್ಯ" ಎಂದು ಹೇಳಿದ್ದಾರೆ. 

1939 ರಲ್ಲಿ ಎಂಬ ಬ್ರಿಟಿಷ್ ಲೇಖಕ ಫಿಲಿಪ್ ಸ್ಪ್ರಾಟ್ ಅವರು ಬರೆದ ಟಿಪ್ಪಣಿಯಲ್ಲಿದ್ದ "ಗುಜರಾತ್ ಆರ್ಥಿಕವಾಗಿ ಬಹಳ ಮುಂದಿದ್ದರೂ ಸಾಂಸ್ಕೃತಿಕವಾಗಿ ಬಹಳ ಹಿಂದಿದೆ. ಇದಕ್ಕೆ ತದ್ವಿರುದ್ಧವಾಗಿ ಪಶ್ಚಿಮ ಬಂಗಾಲ ಆರ್ಥಿಕವಾಗಿ ಬಹಳ ದುರ್ಬಲವಾಗಿದ್ದರೂ ಸಾಂಸ್ಕೃತಿಕವಾಗಿ ಬಹಳ ಉನ್ನತ ಸ್ಥಾನದಲ್ಲಿದೆ" ಎಂಬ ಮಾತನ್ನು ಗುಹಾ ಇತ್ತೀಚಿಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗುಜರಾತ್ ಮುಖ್ಯಮಂತ್ರಿ ರೂಪಾಣಿ ಅವರು "ಈ ಉನ್ನತ ವರ್ಗದ ಬುದ್ಧಿಜೀವಿಗಳು ಭಾರತೀಯರನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News