×
Ad

‘ಎಚ್‌ಐಎಫ್ ಇಂಡಿಯಾ ಪ್ರೊಜೆಕ್ಟ್ ಬೂಂದ್’ಗೆ ಚಾಲನೆ

Update: 2020-06-13 19:44 IST

ಮಂಗಳೂರು, ಜೂ.13: ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಜಲಕ್ಷಾಮ ನಿವಾರಣೆಗಾಗಿ ಇದೀಗ ಹೊಸ ಯೋಜನೆಯೊಂದನ್ನು ರೂಪಿಸಿದೆ.

ನೀರಿನ ಸಮಸ್ಯೆ ಎದುರಿಸುವ ಆರ್ಥಿಕವಾಗಿ ತೀರಾ ಹಿಂದುಳಿದ ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗಾಗಿ ಸರಕಾರಿ ಜಮೀನಿನಲ್ಲಿ ಸ್ಥಳೀಯಾಡಳಿತದ ಅನುಮತಿ ಪಡೆದು ಬೋರ್‌ವೆಲ್ ಕೊರೆಸುವುದು, ಬಾವಿ ತೋಡಿಸುವುದು, ಬಾವಿ ದುರಸ್ತಿ ಮಾಡಿಸುವುದು, ವಾಟರ್ ಫ್ಯೂರಿಫೈ ಅಳವಡಿಕೆ ಇತ್ಯಾದಿಗೆ ಹೆಚ್ಚು ಒತ್ತು ಕೊಟ್ಟು ಕಾರ್ಯನಿರ್ವಹಿಸಲು ‘ಎಚ್‌ಐಎಫ್ ಇಂಡಿಯಾ ಪ್ರೊಜೆಕ್ಟ್ ಬೂಂದ್ (ಹನಿ)’ ಯೋಜನೆ ಹಮ್ಮಿಕೊಂಡಿದೆ.

ಈ ಯೋಜನೆಯ ಮೊದಲ ಕಾರ್ಯಕ್ರಮವಾಗಿ ದೇರಳಕಟ್ಟೆ ಸಮೀಪದ ಮೊಂಟೆಪದವು ಎಂಬಲ್ಲಿ ಶನಿವಾರ ಸಂಜೆ ಬೋರ್‌ವೆಲ್ ಕೊರೆಸಲಾಯಿತು. ಮಂಗಳೂರಿನ ಡೆಕ್ಕನ್ ಗ್ರೂಪ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಬಿ.ಎಚ್. ಅಸ್ಗರ್ ಅಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇಕ್ರಾ ಅರೆಬಿಕ್ ಸ್ಕೂಲ್‌ನ ಶಿಕ್ಷಕ ಮೌಲಾನಾ ಫರ್ಹಾನ್ ದುಆಗೈದರು. ಎಚ್‌ಐಎಫ್ ಅಧ್ಯಕ್ಷ ಸಾಜಿದ್ ಎ.ಕೆ., ಕೆಕೆಎಂಎ ಕರ್ನಾಟಕ ರಾಜ್ಯಾಧ್ಯಕ್ಷ ಎಸ್.ಎಂ.ಫಾರೂಕ್, ಉದ್ಯಮಿ ಹಾಗೂ ಸಮಾಜ ಸೇವಕ ಅಶ್ರಫ್ ಮಡಿಕೇರಿ, ಎಚ್‌ಐಎಫ್ ಕಾರ್ಯದರ್ಶಿ ಔಸಫ್ ಹುಸೈನ್, ಕೋಶಾಧಿಕಾರಿ ರಿಝ್ವಾನ್ ಪಾಂಡೇಶ್ವರ, ಸ್ಥಳೀಯ ಮಸೀದಿಯ ಜಬ್ಬಾರ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.

‘ಎಚ್‌ಐಎಫ್ ಇಂಡಿಯಾ ಪ್ರೊಜೆಕ್ಸ್ ಬೂಂದ್’ ಯೋಜನೆ ಬಗ್ಗೆ ಮಾಹಿತಿ ನೀಡಿದ ಎಚ್‌ಐಎಫ್ ಅಧ್ಯಕ್ಷ ಸಾಜಿದ್ ಎ.ಕೆ., ನಮ್ಮ ಸಂಸ್ಥೆಯ ವತಿಯಿಂದ ಕೆಲವು ವರ್ಷದಿಂದ ಮಂಗಳೂರು ನಗರ ಸಹಿತ ಹಲವು ಕಡೆ ನೀರಿನ ಸಮಸ್ಯೆ ಎದುರಾದ ಪ್ರದೇಶಗಳಿಗೆ ನೀರಿನ ಪೂರೈಕೆ ಮಾಡಿವೆ. ಇದೀಗ ಇದಕ್ಕೆ ಇನ್ನಷ್ಟು ವೇಗ ನೀಡುವ ಸಲುವಾಗಿ ‘ಎಚ್‌ಐಎಫ್ ಇಂಡಿಯಾ ಪ್ರೊಜೆಕ್ಸ್ ಬೂಂದ್’ ಯೋಜನೆಯೊಂದನ್ನು ಹಮ್ಮಿಕೊಂಡಿದ್ದೇವೆ. ಆ ಮೂಲಕ ಜಲಕ್ಷಾಮ ನಿವಾರಿಸಲು ಪ್ರಯತ್ನಿಸುವೆವು. ವರ್ಷಕ್ಕೆ ಕನಿಷ್ಟ 12 ಬೋರ್‌ವೆಲ್ ಕೊರೆಸುವ ಉದ್ದೇಶವಿದೆ. ಜೊತೆಗೆ ಬಾವಿ ತೋಡಿಸುವುದು, ದುರಸ್ತಿ ಮಾಡಿಸುವುದು ಹೀಗೆ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News