ಬಾಳೇಬರೆ ಘಾಟಿಯಲ್ಲಿ ಉರುಳಿದ ಮರ: ಸಂಚಾರಕ್ಕೆ ಅಡ್ಡಿ

Update: 2020-06-13 15:27 GMT

ಅಮಾಸೆಬೈಲು, ಜೂ.13: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಶನಿವಾರ ಬೆಳಗ್ಗೆ 11ರ ಸುಮಾರಿಗೆ ಹೊಸಂಗಡಿ ಬಳಿಯ ಬಾಳೇಬರೆ ಘಾಟಿಯಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಕೆಲ ಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ರಸ್ತೆ ಬದಿಯ ಬೃಹತ್ ಮರ ರಸ್ತೆಗೆ ಅಡ್ಡವಾಗಿ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದ ಎರಡೂ ಕಡೆಯಿಂದ ಬಂದ ವಾಹನಗಳು ಸಂಚರಿಸಲಾಗದೆ ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಬಳಿಕ ಸ್ಥಳಕ್ಕೆ ಅಮಾಸೆಬೈಲು ಪೊಲೀಸರು ಹಾಗೂ ಅರಣ್ಯ ಇಲಾಖೆಯವರು, ಹೊಸಂಗಡಿ ಗ್ರಾಪಂ ಗ್ರಾಮ ಕರಣಿಕ ಚಂದ್ರಶೇಖರ್ ಆಗಮಿಸಿ ಪರಿಶೀಲನೆ ನಡೆಸಿದರು. ಸುಮಾರು ಒಂದೂವರೆ ಗಂಟೆಗಳ ನಂತರ ಮರವನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಜಿಲ್ಲೆಯಲ್ಲಿ ಭಾರೀ ಮಳೆ, ಅಲ್ಲಲ್ಲಿ ಹಾನಿ

ಜಿಲ್ಲೆಯಲ್ಲಿ ಇಂದು ಭಾರೀ ಮಳೆ ಸುರಿಯುತ್ತಿದೆ. ನಿನ್ನೆಯೂ ಜಿಲ್ಲೆಯಲ್ಲಿ ಸತತ ಮಳೆ ಸುರಿದಿದ್ದು, ಕುಂದಾಪುರ ಮತ್ತು ಕಾಪು ತಾಲೂಕುಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 57ಮಿ.ಮೀ. ಮಳೆಯಾಗಿದೆ.

ಉಡುಪಿಯಲ್ಲಿ 76ಮಿ.ಮೀ., ಕುಂದಾಪುರದಲ್ಲಿ 64ಮಿ.ಮೀ. ಹಾಗೂ ಕಾರ್ಕಳದಲ್ಲಿ 31ಮಿ.ಮೀ. ಮಳೆಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಲಕ್ಷಾಂತರ ರೂ.ವೌಲ್ಯದ ಸೊತ್ತುಗಳಿಗೆ ಹಾನಿಯಾಗಿದೆ ಎಂದು ಜಿ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಅಂಗನವಾಡಿಗೆ ಹಾನಿ: ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿ ನಿನ್ನೆ ಬೀಸಿದ ಗಾಳಿ ಮಳೆಗೆ ಹಲವು ಮನೆಗಳ ಮೇಲೆ ಮರಗಳು ಉರುಳಿ ದೊಡ್ಡ ಮಟ್ಟದ ಹಾನಿ ಸಂಭವಿಸಿದೆ. ಗಜೇಂದ್ರದ ಅವರ ವಾಸ್ತವ್ಯದ ಮನೆಗೆ 30ಸಾವಿರ ರೂ., ಗಿರಿಜ ಅವರ ಮನೆಗೆ 35ಸಾವಿರ, ಲಕ್ಷ್ಮೀ ದೇವಾಡಿಗರ ಮನೆಗೆ 30ಸಾವಿರ, ಸೀತಾ ಅವರ ಮನೆಗೆ 80ಸಾವಿರ ರೂ., ಚಿಕ್ಕು ಅವರ ಮನೆಗೆ 25ಸಾವಿರ ರೂ., ಗುಲಾಬಿ ಅವರ ಮನೆಗೆ 30ಸಾವಿರ, ಪ್ರಭಾಕರರ ಮನೆಗೆ 30ಸಾವಿರ ರೂ. ಹಾಗೂ ಗ್ರಾಮದಲ್ಲಿರುವ ಹಾಲು ಡೈರಿ ಕಟ್ಟಡ ಮೇಲ್ಚಾವಣಿಗೆ 30 ಸಾವಿರ ರೂ. ಹಾಗೂ ಗ್ರಾಮದ ಅಂಗನವಾಡಿ ಕಟ್ಟಡದ ಮೇಲೆ ಮರ ಬಿದು್ದ 30ಸಾವಿರ ರೂ. ನಷ್ಟ ಸಂಭವಿಸಿದೆ.

ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಸುಂದರ ಖಾರ್ವಿ ಅವರ ಪಕ್ಕಾ ಮನೆಗೆ ಗಾಳಿ-ಮಳೆಯಿಂದ 50 ಸಾವಿರ ರೂ. ಹಾಗೂ ಶೀರೂರು ಗ್ರಾಮದ ನಾರಾಯಣ ಅವರ ಪಕ್ಕಾ ಮನೆಯ ಮೇಲ್ಚಾವಣಿ ಗಾಳಿಗೆ ಹಾರಿಹೋಗಿ ಒಂದು ಲಕ್ಷ ರೂ.ನಷ್ಟವಾಗಿದೆ.

ಕಾಪು ತಾಲೂಕಿನ ನಂದಿಕೂರು ಗ್ರಾಮದ ಜಯಕರ ಅವರ ಮನೆ ಮೇಲೆ ಮರ ಬಿದ್ದು 15 ಸಾವಿರ ರೂ., ಅದೇ ಗ್ರಾಮದ ಮುದ್ದು ಭಾಸ್ಕರ ಅವರ ಮೇಲೆ ಮರ ಬಿದ್ದು 15 ಸಾವಿರ ರೂ.ಹಾನಿಯಾಗಿದೆ. ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಫಕ್ರುದ್ದೀನ್ ಇವರ ವಾಸ್ತವ್ಯದ ಪಕ್ಕಾ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿ 30ಸಾವಿರ ರೂ., 76 ಬಡಗುಬೆಟ್ಟು ಗ್ರಾಮದ ಲೋಕಯ್ಯ ಇವರ ಮನೆಗೆ 35 ಸಾವಿರ ಹಾಗೂ ಬಡಾನಿಡಿಯೂರು ಗ್ರಾಮದ ತುಕಾರಾಮ್ ರಾವ್ ಅವರ ಮನೆ ಮೇಲೆ ತೆಂಗಿನಮರ ಬಿದ್ದು 15ಸಾವಿರ ರೂ.ನಷ್ಟ ಸಂಭವಿಸಿದೆ.

ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಆನಂದ ಕುಲಾಲರ ಮನೆಯ ತೋಟಕ್ಕೆ ನಿನ್ನೆ ಬೀಸಿದ ಗಾಳಿಯಿಂದ 20 ಸಾವಿರ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಅಲ್ಲದೇ ತಾಲೂಕಿನ ತೆಕ್ಕಟ್ಟೆ ಗ್ರಾಮದ ಗುಲಾಬಿ ಎಂಬವರ ಮನೆಯ ಜಾನುವಾರ ಕೊಟ್ಟಿಗೆಗೆ 30 ಸಾವಿರ ರೂ. ಹಾನಿ ಸಂಭ  ವಿಸಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News