ಸಮಾನ ಅವಕಾಶದ ಸಮಾಜ ದೂರದ ಕನಸು ಎಂದು ಕೊರೋನ ತೋರಿಸಿಕೊಟ್ಟಿದೆ: ಹೈಕೋರ್ಟ್

Update: 2020-06-13 16:13 GMT

ಮುಂಬೈ, ಜೂ.13: ದೇಶದಲ್ಲಿ ಕೊರೋನ ಸೋಂಕು ಪ್ರಕರಣ ಹೆಚ್ಚುತ್ತಿರುವ ಮತ್ತು ವಲಸೆ ಕಾರ್ಮಿಕರ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಸಂವಿಧಾನದಲ್ಲಿ ಖಾತರಿಗೊಳಿಸಿದ ಹೊರತಾಗಿಯೂ, ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಸಮಾಜ ನಿರ್ಮಾಣ ದೂರದ ಕನಸಾಗಿಯೇ ಉಳಿದಿರುವುದನ್ನು ಕೊರೋನ ಸೋಂಕು ಎತ್ತಿತೋರಿಸಿದೆ ಎಂದಿದೆ.

ದೇಶದ ಅರ್ಥವ್ಯವಸ್ಥೆ ಮತ್ತು ಆರೋಗ್ಯಕ್ಷೇತ್ರದ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ದಿನದಲ್ಲೂ ಸಮಾನ ನ್ಯಾಯದ ಸಮಾಜ ಮರೀಚಿಕೆಯಾಗಿಯೇ ಉಳಿಯುವ ಸಂಭವವಿದೆ. ಕೊರೋನ ಸೋಂಕಿನ ಬಿಕ್ಕಟ್ಟು ಹಾಗೂ ಲಾಕ್‌ಡೌನ್ ಭಾರತದ ಅರ್ಥವ್ಯವಸ್ಥೆಯ ಮೇಲೆ ಪ್ರಹಾರ ಎಸಗಿದೆ ಮತ್ತು ದೇಶದಲ್ಲಿರುವ ವಲಸೆ ಕಾರ್ಮಿಕರ ಪರಿಸ್ಥಿತಿ ಎಷ್ಟೊಂದು ದಯನೀಯವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಹೈಕೋರ್ಟ್‌ನ ನ್ಯಾಯಪೀಠ ಹೇಳಿದೆ. ಆದರೆ ಇದರಿಂದ ಪಾಠ ಕಲಿತು ರಾಜ್ಯದ ಆರೋಗ್ಯಕ್ಷೇತ್ರವನ್ನು ಬಲಪಡಿಸುವ ಸಮಯ ಇದಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಆರೋಗ್ಯಕ್ಷೇತ್ರಕ್ಕೆ ಒದಗಿಸಿರುವ ಬಜೆಟ್ ಅನುದಾನ ಮತ್ತು ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸುವಂತೆ ಹಾಗೂ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುವ ಸಂದರ್ಭ ತುರ್ತು ಆರೈಕೆಯ ಅಗತ್ಯವಿರುವವರಿಗೆ ಆದ್ಯತೆ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಸೂಚಿಸಿದೆ.

 ಮಹಾರಾಷ್ಟ್ರದಲ್ಲಿ ಆರೋಗ್ಯ ಕಾರ್ಯಕರ್ತರು, ಕೊರೋನ ಸೋಂಕಿತ ರೋಗಿಗಳು ಹಾಗೂ ಇತರ ರೋಗಿಗಳಿಗೆ ನೆರವು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಸಂದರ್ಭ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಪರೀಕ್ಷೆ ನಡೆಸುವ ಕಿಟ್‌ಗಳು, ಪಿಪಿಇಗಳನ್ನು ಒದಗಿಸಬೇಕು, ಸಂಚಾರಿ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಬೇಕು ಮತ್ತು ಆಸ್ಪತ್ರೆಗಳಲ್ಲಿ ಬೆಡ್ ಸಹಿತ ಮೂಲಸೌಕರ್ಯ ಹೆಚ್ಚಿಸಬೆೀಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಕೊರೋನ ಸೋಂಕು ಪರೀಕ್ಷೆಯ ಪ್ರಮಾಣ ಮತ್ತು ಸ್ಕ್ರೀನಿಂಗ್ ಹೆಚ್ಚಿಸಬೇಕು ಮತ್ತು ಎಲ್ಲಾ ವರ್ಗದ ಸೋಂಕಿತ ರೋಗಿಗಳ ನಿರ್ವಹಣೆ ಬಗ್ಗೆ ತುರ್ತು ಕಾರ್ಯತಂತ್ರ ರೂಪಿಸಬೇಕು. ಹಾಗೂ ಕೊರೋನ ಸೋಂಕಿತ ರೋಗಿಗಳಿಗೆ ಮತ್ತು ಇತರ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಇರುವ ಬೆಡ್‌ಗಳ ಸಂಖ್ಯೆ, ಲಭ್ಯವಿರುವ ವೈದ್ಯರ ಕುರಿತು ವಾಸ್ತವಿಕ ಮಾಹಿತಿಯನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News